ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 15

ಗಡೀಪಾರಾದ ಒಬ್ಬ ಪ್ರವಾದಿ ಹಾಗೂ ಅವನಿಗಾದ ಭವಿಷ್ಯದರ್ಶನ

ಗಡೀಪಾರಾದ ಒಬ್ಬ ಪ್ರವಾದಿ ಹಾಗೂ ಅವನಿಗಾದ ಭವಿಷ್ಯದರ್ಶನ

ದಾನಿಯೇಲನು ದೇವರ ರಾಜ್ಯದ ಕುರಿತು ಹಾಗೂ ಬರಲಿರುವ ಮೆಸ್ಸೀಯನ ಕುರಿತು ಪ್ರವಾದನೆ ನುಡಿಯುತ್ತಾನೆ. ಬ್ಯಾಬಿಲೋನ್‌ ನಾಶವಾಗುತ್ತದೆ

ದಾನಿಯೇಲನು ದೇವರಲ್ಲಿ ಭಕ್ತಿ, ಸಮಗ್ರತೆಯಿದ್ದ ಒಬ್ಬ ಯುವಕನಾಗಿದ್ದನು. ಯೆರೂಸಲೇಮ್‌ ನಾಶವಾಗುವ ಮುಂಚೆಯೇ ಅವನನ್ನು ಬ್ಯಾಬಿಲೋನಿಗೆ ಗಡೀಪಾರು ಮಾಡಲಾಗಿತ್ತು. ಅಲ್ಲಿ ಅವನಿಗೂ ಅವನೊಂದಿಗೆ ಗಡೀಪಾರಾಗಿದ್ದ ಇತರ ಕೆಲವು ಮಂದಿಗೂ ರಾಜನು ಸ್ವಲ್ಪಮಟ್ಟಿಗಿನ ಸ್ವಾತಂತ್ರ್ಯವನ್ನು ಕೊಟ್ಟಿದ್ದನು. ದಾನಿಯೇಲನ ಮೇಲೆ ಸದಾ ದೇವರ ಕೃಪೆ ಇತ್ತು. ಒಂದು ಸಂದರ್ಭದಲ್ಲಿ ಅವನನ್ನು ಸಿಂಹಗಳ ಗವಿಯಲ್ಲಿ ಎಸೆಯಲಾಯಿತಾದರೂ ದೇವರ ಸಹಾಯದಿಂದ ಅವನು ಸಾವಿನದವಡೆಯಿಂದ ಪಾರಾದನು. ಮಾತ್ರವಲ್ಲ, ಭವಿಷ್ಯದ ನಸುನೋಟವನ್ನು ನೀಡುವ ದರ್ಶನಗಳನ್ನೂ ದೇವರು ಅವನಿಗೆ ದಯಪಾಲಿಸಿದನು. ದಾನಿಯೇಲನ ಪ್ರವಾದನಾ ನುಡಿಗಳು ಮುಖ್ಯವಾಗಿ ಮೆಸ್ಸೀಯ ಹಾಗೂ ಅವನ ಆಳ್ವಿಕೆಯ ಕುರಿತು ಬೆಳಕನ್ನು ಚೆಲ್ಲಿದವು.

ಮೆಸ್ಸೀಯನ ಆಗಮನದ ಕುರಿತು ದಾನಿಯೇಲನ ಪ್ರವಾದನೆ. “ಅಭಿಷಿಕ್ತನಾದ ಪ್ರಭು”ವಿನ ಅಥವಾ ಮೆಸ್ಸೀಯನ ಆಗಮನವನ್ನು ದೇವಜನರು ಯಾವಾಗ ನಿರೀಕ್ಷಿಸಬಹುದೆಂದು ದಾನಿಯೇಲನಿಗೆ ತಿಳಿಸಲಾಯಿತು. ಯೆರೂಸಲೇಮಿನ ಗೋಡೆಯನ್ನು ಪುನಃ ಕಟ್ಟುವಂತೆ ಆಜ್ಞೆಯು ಕೊಡಲ್ಪಟ್ಟು ‘69 ಸಾಂಕೇತಿಕ ವಾರಗಳು’ ಕಳೆದ ಮೇಲೆ ಮೆಸ್ಸೀಯನು ಆಗಮಿಸಲಿದ್ದನು. ಒಂದು ಸಾಮಾನ್ಯ ವಾರದಲ್ಲಿ ಏಳು ದಿನಗಳು ಇರುತ್ತವೆ. ಆದರೆ ಈ ಪ್ರವಾದನೆಯಲ್ಲಿ ತಿಳಿಸಲಾಗಿರುವ ‘ಸಾಂಕೇತಿಕ ವಾರದಲ್ಲಿ’ ಏಳು ವರ್ಷಗಳಿರುವವು. ಹಾಗಾದರೆ, ‘69 ಸಾಂಕೇತಿಕ ವಾರಗಳು’ 483 ವರ್ಷಗಳಿಗೆ ಸಮವಾಗಿದ್ದು, ಯೆರೂಸಲೇಮಿನ ಗೋಡೆಯನ್ನು ಪುನಃ ಕಟ್ಟುವ ಆಜ್ಞೆಯು ಕೊಡಲ್ಪಟ್ಟು 483 ವರ್ಷಗಳು ಕಳೆದ ಬಳಿಕ ಮೆಸ್ಸೀಯನು ಆಗಮಿಸಲಿದ್ದನು. ಈ ಆಜ್ಞೆಯನ್ನು ದಾನಿಯೇಲನ ಜೀವಮಾನದ ಎಷ್ಟೋ ಸಮಯದ ನಂತರ ಅಂದರೆ ಕ್ರಿ.ಪೂ. 455ನೇ ಇಸವಿಯಲ್ಲಿ ಕೊಡಲಾಯಿತು. ಆ ಇಸವಿಯಿಂದ 483 ವರ್ಷಗಳನ್ನು ಲೆಕ್ಕಮಾಡುವುದಾದರೆ ಅದು ಕ್ರಿ.ಶ. 29ಕ್ಕೆ ಬಂದು ನಿಲ್ಲುತ್ತದೆ. ಆ ವರ್ಷದಲ್ಲಿ ಏನು ನಡೆಯಿತು ಎಂಬುದನ್ನು ನಾವು ಮುಂದಿನ ಅಧ್ಯಾಯದಲ್ಲಿ ನೋಡಲಿದ್ದೇವೆ. ನಮ್ಮ ಪಾಪಪರಿಹಾರಕ್ಕಾಗಿ ಮೆಸ್ಸೀಯನು “ಛೇದಿಸಲ್ಪಡುವನು” ಅಂದರೆ ಸಾಯುವನೆಂದು ಸಹ ದಾನಿಯೇಲನು ಈ ದರ್ಶನದಿಂದ ತಿಳಿದುಕೊಂಡನು.—ದಾನಿಯೇಲ 9:24-26.

ಮೆಸ್ಸೀಯನು ಸ್ವರ್ಗದಲ್ಲಿ ರಾಜನಾಗುವನು. ದಾನಿಯೇಲನಿಗೆ ಸ್ವರ್ಗದ ಒಂದು ದಿವ್ಯ ದರ್ಶನವಾಯಿತು. ಆ ದರ್ಶನದಲ್ಲಿ “ಮನುಷ್ಯಕುಮಾರನಂತಿರುವವನು” ಎಂದು ಹೇಳಲಾಗಿರುವ ಮೆಸ್ಸೀಯನು ಯೆಹೋವ ದೇವರ ಸಿಂಹಾಸನದ ಮುಂದೆ ಬರುವುದನ್ನೂ ದೇವರು ಅವನಿಗೆ ‘ದೊರೆತನ, ಘನತೆ ಹಾಗೂ ರಾಜ್ಯವನ್ನು’ ಕೊಡುವುದನ್ನೂ ದಾನಿಯೇಲನು ನೋಡಿದನು. ಮೆಸ್ಸೀಯನಿಗೆ ಕೊಡಲಾದ ಈ ರಾಜ್ಯವು ಎಂದಿಗೂ ಅಳಿಯದೆ ಶಾಶ್ವತವಾಗಿರುವುದು. ಮೆಸ್ಸೀಯ ರಾಜ್ಯದ ಕುರಿತು ಮೈನವಿರೇಳಿಸುವ ಇನ್ನೊಂದು ವಿಷಯವನ್ನು ದಾನಿಯೇಲನು ತಿಳಿದುಕೊಂಡನು. ಅದೇನೆಂದರೆ, ಮೆಸ್ಸೀಯನೊಂದಿಗೆ ‘ಪರಾತ್ಪರನ ಭಕ್ತಜನರು’ ಎಂದು ಕರೆಯಲ್ಪಡುವ ಒಂದು ಗುಂಪು ಸಹ ರಾಜ್ಯವನ್ನು ಆಳುತ್ತದೆ.—ದಾನಿಯೇಲ 7:13, 14, 27.

ಮೆಸ್ಸೀಯ ರಾಜ್ಯವು ಈ ಲೋಕದ ಎಲ್ಲಾ ಸರ್ಕಾರಗಳನ್ನು ನಾಶಮಾಡುವುದು. ಬ್ಯಾಬಿಲೋನಿನ ರಾಜ ನೆಬೂಕದ್ನೆಚ್ಚರನು ಒಂದು ಕನಸು ಕಂಡು ಬಹಳ ಕಳವಳಗೊಂಡನು. ಆ ಕನಸಿನ ಅರ್ಥವನ್ನು ತಿಳಿಸುವ ಶಕ್ತಿಯನ್ನು ದೇವರು ದಾನಿಯೇಲನಿಗೆ ಕೊಟ್ಟನು. ರಾಜನು ತನ್ನ ಕನಸಿನಲ್ಲಿ ಒಂದು ದೊಡ್ಡ ಪ್ರತಿಮೆಯನ್ನು ನೋಡಿದ್ದನು. ಆ ಪ್ರತಿಮೆಯ ತಲೆ ಅಪರಂಜಿ ಅಥವಾ ಚಿನ್ನ, ಎದೆತೋಳು ಬೆಳ್ಳಿ, ಹೊಟ್ಟೆಸೊಂಟ ತಾಮ್ರ, ಕಾಲುಗಳು ಕಬ್ಬಿಣ, ಹೆಜ್ಜೆ ಅಥವಾ ಪಾದಗಳು ಕಬ್ಬಿಣ ಮಿಶ್ರಿತ ಮಣ್ಣಿನಿಂದ ಮಾಡಲ್ಪಟ್ಟಿದ್ದವು. ಬೆಟ್ಟದಿಂದ ಸಿಡಿದು ಬಂದ ಒಂದು ಗುಂಡುಬಂಡೆಯು ಆ ಪ್ರತಿಮೆಯ ಪಾದಗಳಿಗೆ ಬಡಿದು ಪ್ರತಿಮೆಯನ್ನು ಪುಡಿಪುಡಿ ಮಾಡಿತು. ಈ ಪ್ರತಿಮೆಯ ಚಿನ್ನದ ತಲೆ ಬ್ಯಾಬಿಲೋನ್‌ ಲೋಕಶಕ್ತಿಯೆಂದು ದಾನಿಯೇಲನು ವಿವರಿಸಿದನು. ಇತರ ಲೋಹದ ಒಂದೊಂದು ಭಾಗಗಳು ಬ್ಯಾಬಿಲೋನಿನ ನಂತರ ಅನುಕ್ರಮವಾಗಿ ಬರುವ ಒಂದೊಂದು ಲೋಕಶಕ್ತಿಗಳನ್ನು ಸೂಚಿಸುತ್ತವೆಂದು ದಾನಿಯೇಲನು ಹೇಳಿದನು. ಇವುಗಳಲ್ಲಿ ಕೊನೆಯ ಲೋಕಶಕ್ತಿ ಆಳುವ ಸಮಯದಲ್ಲಿ ದೇವರ ರಾಜ್ಯವು ಕಾರ್ಯಪ್ರವೃತ್ತಗೊಳ್ಳುತ್ತದೆ ಎಂಬುದನ್ನು ದಾನಿಯೇಲನು ತಿಳಿದುಕೊಂಡನು. ದೇವರ ರಾಜ್ಯವು ಲೋಕದ ಎಲ್ಲಾ ಸರ್ಕಾರಗಳನ್ನು ಪುಡಿಪುಡಿ ಮಾಡಿ ನಿರ್ನಾಮ ಮಾಡುವುದು. ಅನಂತರ ಶಾಶ್ವತವಾಗಿ ಆಳುವುದು.—ದಾನಿಯೇಲ ಅಧ್ಯಾಯ 2.

ವೃದ್ಧನಾಗಿದ್ದ ದಾನಿಯೇಲನು ಬ್ಯಾಬಿಲೋನ್‌ ನಾಶವಾಗುವುದನ್ನು ಕಣ್ಣಾರೆ ಕಂಡನು. ಪ್ರವಾದಿಗಳು ತಿಳಿಸಿದಂತೆಯೇ ರಾಜ ಕೋರೇಷನು ಆ ಪಟ್ಟಣವನ್ನು ನಾಶಪಡಿಸಿದನು. ಅದಾಗಿ ಸ್ವಲ್ಪ ಸಮಯದಲ್ಲಿ ಯೆಹೂದ್ಯರನ್ನು ಬಿಡುಗಡೆ ಮಾಡಲಾಯಿತು. ಈ ಬಿಡುಗಡೆಯು ಯೆರೂಸಲೇಮ್‌ ನಿರ್ಜನಗೊಂಡು ಸರಿಯಾಗಿ 70 ವರ್ಷಗಳು ಕಳೆದ ನಂತರವೇ ನಡೆಯಿತು. ಈ ಯೆಹೂದ್ಯರು ಕ್ರಮೇಣ ದೇಶಾಧಿಪತಿಗಳು, ಯಾಜಕರು ಮತ್ತು ಪ್ರವಾದಿಗಳ ಮೇಲ್ವಿಚಾರಣೆಯ ಕೆಳಗೆ ಯೆರೂಸಲೇಮನ್ನು ಹಾಗೂ ಯೆಹೋವನ ಆಲಯವನ್ನು ಪುನಃ ಕಟ್ಟಿದರು. ಆದರೆ 69 ಸಾಂಕೇತಿಕ ವಾರಗಳು ಅಂದರೆ 483 ವರ್ಷಗಳು ಕಳೆದ ಮೇಲೆ ಏನಾಗಲಿತ್ತು?

ದಾನಿಯೇಲ ಪುಸ್ತಕದ ಮೇಲೆ ಆಧಾರಿತವಾಗಿದೆ.