ಅಧ್ಯಾಯ 19
ಭವಿಷ್ಯತ್ತಿನ ಕುರಿತು ಯೇಸು ನುಡಿದ ಪ್ರವಾದನೆ
ಭವಿಷ್ಯತ್ತಿನಲ್ಲಿ ನಡೆಯಲಿದ್ದ ಕೆಲವು ಪ್ರಮುಖ ಸಂಗತಿಗಳನ್ನು ಯೇಸು ಶಿಷ್ಯರಿಗೆ ತಿಳಿಸುತ್ತಾನೆ. ಆ ಸಂಗತಿಗಳು ಯೇಸುವಿನ ಸಾನ್ನಿಧ್ಯ ಅಂದರೆ ಯೇಸು ರಾಜ್ಯಾಧಿಕಾರದೊಂದಿಗೆ ಬರುವ ಸಮಯ ಮತ್ತು ಈ ಲೋಕದ ವ್ಯವಸ್ಥೆಯು ಅಂತ್ಯವಾಗುವ ಸಮಯವನ್ನು ಸೂಚಿಸುತ್ತವೆ
ಯೇಸು ಆಲೀವ್ ಮರಗಳ ಗುಡ್ಡದ ಮೇಲೆ ಕುಳಿತಿದ್ದನು. ಅಲ್ಲಿಂದ ಕೆಳಗೆ ಯೆರೂಸಲೇಮ್ ಪಟ್ಟಣ ಹಾಗೂ ದೇವಾಲಯದ ಭವ್ಯ ದೃಶ್ಯವು ಕಾಣಿಸುತ್ತಿತ್ತು. ಆ ದೇವಾಲಯ ನಾಶವಾಗುವುದೆಂದು ಯೇಸು ಸ್ವಲ್ಪ ಮುಂಚೆಯಷ್ಟೇ ಶಿಷ್ಯರಿಗೆ ತಿಳಿಸಿದ್ದನು. ಮಾತ್ರವಲ್ಲ “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” ಕುರಿತೂ ಹಿಂದೊಮ್ಮೆ ಅವನು ಅವರಿಗೆ ಹೇಳಿದ್ದನು. ಈ ಎಲ್ಲಾ ಸಂಗತಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲಿಕ್ಕಾಗಿ ನಾಲ್ಕು ಮಂದಿ ಅಪೊಸ್ತಲರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದರು. (ಮತ್ತಾಯ 13:40, 49) ಅವರು ಅವನನ್ನು ಸಮೀಪಿಸಿ, “ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?” ಎಂದು ಕೇಳಿದರು.—ಮತ್ತಾಯ 24:3.
ಯೇಸು ಅವರ ಈ ಪ್ರಶ್ನೆಗೆ ಉತ್ತರಿಸುತ್ತಾ ಯೆರೂಸಲೇಮಿನ ನಾಶನದ ಮೊದಲು ಏನೆಲ್ಲ ನಡೆಯಲಿದೆ ಎಂಬುದನ್ನು ವಿವರಿಸಿದನು. ಆತನು ಶಿಷ್ಯರಿಗೆ ವಿವರಿಸಿದ ಈ ಸಂಗತಿಗಳು ಯೆರೂಸಲೇಮಿನ ನಾಶನಕ್ಕೆ ಮಾತ್ರ ಸೀಮಿತವಾಗಿರದೆ ಮುಂದೆ ದೊಡ್ಡ ಪ್ರಮಾಣದಲ್ಲಿ ಲೋಕವ್ಯಾಪಕವಾಗಿ ನೆರವೇರಲಿದ್ದವು. ಈ ಪ್ರವಾದನೆಯಲ್ಲಿ ಮುಂದೆ ನಡೆಯಲಿರುವ ಹಲವಾರು ಘಟನೆಗಳನ್ನು ತಿಳಿಸಿದ್ದಲ್ಲದೆ ಆ ಘಟನೆಗಳು ನಡೆಯುವ ಸಮಯದಲ್ಲಿ ಲೋಕದ ಪರಿಸ್ಥಿತಿ ಹೇಗಿರುವುದು ಎಂಬುದನ್ನೂ ಯೇಸು ತಿಳಿಸಿದನು. ಆತನು ತಿಳಿಸಿದ ಈ ಘಟನೆಗಳು ಮತ್ತು ಲೋಕದ ಪರಿಸ್ಥಿತಿಗಳು ಅವನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ‘ಸೂಚನೆ’ಯಾಗಿದ್ದವು. ಈ ‘ಸೂಚನೆ’ಯು, ರಾಜನೋಪಾದಿ ಯೇಸುವಿನ ಸಾನ್ನಿಧ್ಯವು ಸ್ವರ್ಗದಲ್ಲಿ ಆರಂಭಗೊಂಡಿದೆ ಎಂಬುದನ್ನು ಭೂಮಿಯ ಮೇಲಿರುವ ಜನರಿಗೆ ಸ್ಪಷ್ಟವಾಗಿ ತೋರಿಸಿಕೊಡಲಿತ್ತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಈ ಸೂಚನೆಯು, ದೀರ್ಘಕಾಲದ ಹಿಂದೆ ವಾಗ್ದಾನಿಸಲಾದ ಮೆಸ್ಸೀಯ ರಾಜ್ಯದ ರಾಜನನ್ನಾಗಿ ಯೇಸುವನ್ನು ಯೆಹೋವನು ಪಟ್ಟಾಭಿಷೇಕಿಸಿದ್ದಾನೆ ಎಂಬುದನ್ನು ತೋರಿಸಲಿತ್ತು. ಅಲ್ಲದೆ ಆ ರಾಜ್ಯವು ಲೋಕದಲ್ಲಿರುವ ದುಷ್ಟತನವನ್ನು ತೆಗೆದುಹಾಕಿ ಶಾಂತಿಯನ್ನು ಸ್ಥಾಪಿಸುವುದೆಂದೂ ಇದು ಸೂಚಿಸಲಿತ್ತು. ಹೀಗೆ ಯೇಸು ಹೇಳಿದ ಈ ಸೂಚನೆಯು ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳನ್ನು ಗುರುತಿಸಲಿತ್ತು. ಅಂದರೆ ಈಗಿರುವ ಧಾರ್ಮಿಕ, ರಾಜಕೀಯ, ಮತ್ತು ಸಾಮಾಜಿಕ ವ್ಯವಸ್ಥೆಗಳು ಅಂತ್ಯವಾಗಿ ಒಂದು ಹೊಸ ವ್ಯವಸ್ಥೆಯು ಸ್ಥಾಪನೆಯಾಗುವುದೆಂದು ಸೂಚಿಸಲಿತ್ತು.
ತನ್ನ ಸಾನ್ನಿಧ್ಯವು ಸ್ವರ್ಗದಲ್ಲಿ ಆರಂಭಗೊಂಡ ಸಮಯದಲ್ಲಿ ಭೂಮಿಯ ಮೇಲೆ ಪರಿಸ್ಥಿತಿ ಹೇಗಿರುವುದೆಂದು ಶಿಷ್ಯರಿಗೆ ವಿವರಿಸುತ್ತಾ ಯೇಸು, ರಾಷ್ಟ್ರಗಳ ನಡುವೆ ಯುದ್ಧಗಳು ನಡೆಯುವವು, ಆಹಾರದ ಅಭಾವವಿರುವುದು, ಮಹಾ ಭೂಕಂಪಗಳಾಗುವವು, ರೋಗಗಳು ವ್ಯಾಪಕವಾಗಿರುವವು, ಅಧರ್ಮವು ಹೆಚ್ಚಾಗುವುದು ಎಂದು ಹೇಳಿದನು. ಮತ್ತು ತನ್ನ ನಿಜ ಶಿಷ್ಯರು ದೇವರ ರಾಜ್ಯದ ಸುವಾರ್ತೆಯನ್ನು ಭೂಮಿಯಲ್ಲೆಲ್ಲಾ ಸಾರುವರು ಎಂದು ಸಹ ತಿಳಿಸಿದನು. ಈ ಎಲ್ಲಾ ಸಂಗತಿಗಳು, ಇಂದಿನ ವರೆಗೂ ಲೋಕದಲ್ಲಿ ಸಂಭವಿಸಿರದಂಥ ‘ಮಹಾ ಸಂಕಟದಲ್ಲಿ’ ಕೊನೆಗೊಳ್ಳುವವು.—ಮತ್ತಾಯ 24:21.
ಈ ಮಹಾ ಸಂಕಟವು ಹತ್ತಿರವಿದೆ ಎಂದು ಯೇಸುವಿನ ಹಿಂಬಾಲಕರಿಗೆ ಹೇಗೆ ಗೊತ್ತಾಗುವುದು? “ಅಂಜೂರದ ಮರದ ದೃಷ್ಟಾಂತದಿಂದ ಈ ಅಂಶವನ್ನು ಕಲಿಯಿರಿ” ಎಂದು ಯೇಸು ಹೇಳಿದನು. (ಮತ್ತಾಯ 24:32) ಅಂಜೂರದ ಮರವು ಚಿಗುರೊಡೆದು ಎಲೆ ಬಿಡುವುದನ್ನು ನೋಡುವಾಗ ಬೇಸಿಗೆಯು ಹತ್ತಿರವಾಯಿತೆಂದು ಜನರು ತಿಳಿದುಕೊಳ್ಳುತ್ತಿದ್ದರು. ಹಾಗೆಯೇ ಯೇಸು ಹೇಳಿದ ಸಂಗತಿಗಳೆಲ್ಲಾ ಒಂದೇ ಕಾಲಾವಧಿಯಲ್ಲಿ ಸಂಭವಿಸುವುದನ್ನು ನೋಡುವಾಗ ಅಂತ್ಯವು ಹತ್ತಿರವಿದೆ ಎಂದು ಯೇಸುವಿನ ಹಿಂಬಾಲಕರಿಗೆ ತಿಳಿಯುವುದು. ಆದರೆ ಈ ಮಹಾ ಸಂಕಟ ಆರಂಭವಾಗುವ ಸರಿಯಾದ ಗಳಿಗೆ ದೇವರೊಬ್ಬನಿಗೆ ಬಿಟ್ಟು ಇನ್ನಾರಿಗೂ ತಿಳಿದಿಲ್ಲ. ಆದ್ದರಿಂದಲೇ ಯೇಸು ತನ್ನ ಶಿಷ್ಯರಿಗೆ, “ಆ ನೇಮಿತ ಸಮಯವು ಯಾವಾಗ ಎಂಬುದು ನಿಮಗೆ ತಿಳಿಯದ ಕಾರಣ . . . ಎಚ್ಚರವಾಗಿ ಇರಿ” ಎಂದು ಸಲಹೆ ಕೊಟ್ಟನು.—ಮಾರ್ಕ 13:33.
—ಮತ್ತಾಯ ಅಧ್ಯಾಯ 24, 25; ಮಾರ್ಕ ಅಧ್ಯಾಯ 13; ಲೂಕ ಅಧ್ಯಾಯ 21 ರ ಮೇಲೆ ಆಧಾರಿತವಾಗಿದೆ.
^ ಪ್ಯಾರ. 14 ಯೇಸು ಹೇಳಿದ ಪ್ರವಾದನೆಯ ಕುರಿತು ಹೆಚ್ಚನ್ನು ತಿಳಿಯಲು ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ ಪುಟ 86ರಿಂದ 95ನ್ನು ನೋಡಿರಿ.