ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 6

ಯೋಬನ ಸಮಗ್ರತೆ

ಯೋಬನ ಸಮಗ್ರತೆ

ಯೋಬನ ಸಮಗ್ರತೆಯ ಕುರಿತು ಸೈತಾನನು ದೇವರ ಮುಂದೆ ಸವಾಲೆಸೆಯುತ್ತಾನೆ. ಆದರೆ ಯೋಬನು ಯೆಹೋವನಿಗೆ ನಂಬಿಗಸ್ತನಾಗಿಯೇ ಉಳಿಯುತ್ತಾನೆ

ಅತೀವ ಕಷ್ಟಕಾರ್ಪಣ್ಯಗಳು ಬಂದಾಗ ಯಾವ ಮಾನವನಾದರೂ ದೇವರಿಗೆ ನಂಬಿಗಸ್ತನಾಗಿ ಉಳಿಯುವನೋ ಅಥವಾ ಬರೀ ಲಾಭಕ್ಕಾಗಿ ಮಾತ್ರ ಮಾನವನು ದೇವರಲ್ಲಿ ನಂಬಿಕೆಯಿಡುತ್ತಾನೋ? ಹಿಂದಿನ ಕಾಲದಲ್ಲಿ ಜೀವಿಸಿದ್ದ ಒಬ್ಬ ಮನುಷ್ಯನ ಕುರಿತು ಇದೇ ಪ್ರಶ್ನೆಯನ್ನು ಕೇಳಲಾಯಿತು. ಆ ಮನುಷ್ಯನ ಹೆಸರೇ ಯೋಬ.

ಯೋಬನು ಅಬ್ರಹಾಮನ ಒಬ್ಬ ಸಂಬಂಧಿಯಾಗಿದ್ದನು. ಇಸ್ರಾಯೇಲ್‌ ಜನರು ಈಜಿಪ್ಟ್‌ ದೇಶದಲ್ಲಿ ಜೀವಿಸುತ್ತಿದ್ದ ಸಮಯದಲ್ಲಿ ಈಗ ಅರೇಬಿಯ ಎಂದು ಕರೆಯಲ್ಪಡುವ ದೇಶದಲ್ಲಿ ಯೋಬನು ಜೀವಿಸುತ್ತಿದ್ದನು. ಹೀಗಿರುವಾಗ ಒಂದು ದಿನ ಸ್ವರ್ಗದಲ್ಲಿ ದೇವದೂತರು ದೇವರ ಸನ್ನಿಧಾನದಲ್ಲಿ ಒಟ್ಟುಗೂಡಿದಾಗ ದಂಗೆಕೋರ ಸೈತಾನನು ಸಹ ಅಲ್ಲಿಗೆ ಬಂದನು. ಆ ಆತ್ಮಜೀವಿಗಳ ಮುಂದೆ ಯೆಹೋವನು ಯೋಬನು ಒಬ್ಬ ನಿಷ್ಠಾವಂತ ವ್ಯಕ್ತಿಯೆಂದು ಹೊಗಳಿದನು. ಭೂಮಿಯಲ್ಲಿ ಯೋಬನಂತೆ ಸಮಗ್ರತೆ ತೋರಿಸುವವರು ಬೇರೆ ಯಾರೂ ಇಲ್ಲವೆಂಬ ಭರವಸೆಯನ್ನು ಆತನು ವ್ಯಕ್ತಪಡಿಸಿದನು. ಆದರೆ ಸೈತಾನನು ಅದನ್ನು ಒಪ್ಪಲಿಲ್ಲ. ದೇವರು ಆಶೀರ್ವದಿಸಿ ಕಾಪಾಡುತ್ತಿರುವುದರಿಂದಲೇ ಯೋಬನು ದೇವರ ಸೇವೆ ಮಾಡುತ್ತಿದ್ದಾನೆಂದು ಅವನು ವಾದಿಸಿದನು. ಯೋಬನ ಸ್ವತ್ತು ಮುಂತಾದ ಸಕಲ ವಿಷಯಗಳನ್ನು ಕಿತ್ತು ಬರೀಗೈಯಲ್ಲಿ ನಿಲ್ಲಿಸಿದರೆ ಯೋಬನು ಖಂಡಿತ ದೇವರನ್ನು ದೂಷಿಸುವನೆಂಬುದು ಸೈತಾನನ ವಾದವಾಗಿತ್ತು.

ಆ ವಾದವನ್ನು ಸಾಬೀತುಪಡಿಸಿ ತೋರಿಸುವಂತೆ ದೇವರು ಸೈತಾನನಿಗೆ ಅನುಮತಿ ಕೊಟ್ಟನು. ಸೈತಾನನು ಮೊದಲು ಯೋಬನ ಸಿರಿಸಂಪತ್ತನ್ನು ಅಳಿಸಿ ನಂತರ ಮಕ್ಕಳನ್ನೂ ಸಾಯಿಸಿದನು. ಕೊನೆಗೆ ಮಾರಕ ರೋಗವನ್ನು ಬರಮಾಡಿದನು. ಇದನ್ನೆಲ್ಲ ಮಾಡುತ್ತಿರುವವನು ಸೈತಾನನೇ ಎಂಬುದು ಯೋಬನಿಗೆ ತಿಳಿದಿರಲಿಲ್ಲ. ಆದ್ದರಿಂದ, ತಾನು ಕಷ್ಟಪಡುವಂತೆ ದೇವರೇಕೆ ಅನುಮತಿಸಿದ್ದಾನೆಂದು ಯೋಬನಿಗೆ ಅರ್ಥವಾಗಲಿಲ್ಲ. ಇಷ್ಟೆಲ್ಲ ಆದರೂ ಯೋಬನು ಮಾತ್ರ ದೇವರನ್ನು ದೂಷಿಸಲಿಲ್ಲ.

ಯೋಬನನ್ನು ನೋಡಲು ಅವನ ಮೂವರು ಸ್ನೇಹಿತರು ಬಂದರು. ಆದರೆ ಅವರು ನಿಜ ಸ್ನೇಹಿತರಾಗಿರಲಿಲ್ಲ. ಯೋಬನು ಗುಟ್ಟಾಗಿ ಪಾಪಗಳನ್ನು ಮಾಡಿರಬೇಕು, ಆದ್ದರಿಂದಲೇ ದೇವರು ಅವನಿಗೆ ಶಿಕ್ಷೆ ಕೊಡುತ್ತಿದ್ದಾನೆಂಬ ತಪ್ಪು ವಿಚಾರವನ್ನು ಅವರು ಅವನ ಮನಸ್ಸಿನಲ್ಲಿ ತುಂಬಲು ಪ್ರಯತ್ನಿಸಿದರು. ಹೀಗೆ ಒಬ್ಬರ ನಂತರ ಒಬ್ಬರು ಆಡಿದ ಅವರ ಪುಟಗಟ್ಟಳೆ ಮಾತುಗಳನ್ನು ಯೋಬ ಪುಸ್ತಕದಲ್ಲಿ ನಾವು ಓದಬಹುದು. ದೇವರಿಗೆ ತನ್ನ ಸೇವಕರ ಮೇಲೆ ನಂಬಿಕೆಯಿಲ್ಲ ಮತ್ತು ಅವರ ಸೇವೆಯಿಂದ ಪ್ರಸನ್ನನಾಗುವುದೂ ಇಲ್ಲವೆಂದು ಸಹ ಆ ಹುಸಿಮಿತ್ರರು ದೂರಿದರು. ಅವರ ಈ ಕುತರ್ಕವನ್ನೆಲ್ಲ ಯೋಬನು ನಂಬಲಿಲ್ಲ. ಬದಲಿಗೆ, ಸಾಯುವವರೆಗೆ ತನ್ನ ಸಮಗ್ರತೆಯನ್ನು ಬಿಟ್ಟುಕೊಡುವುದಿಲ್ಲವೆಂದು ದೃಢವಿಶ್ವಾಸದಿಂದ ಹೇಳಿದನು.

ಆದರೆ, ಯೋಬನು ತನ್ನ ಕುರಿತೇ ಅತಿಯಾಗಿ ಚಿಂತಿಸಿದನು. ತನ್ನಲ್ಲಿ ಏನೂ ದೋಷವಿಲ್ಲ, ತಾನು ಯಾವಾಗಲೂ ಸರಿ ಎಂಬ ತಪ್ಪಾದ ಮನೋಭಾವ ಅವನಲ್ಲಿತ್ತು. ಆದರೆ ಅವರ ಸಂಭಾಷಣೆಯನ್ನು ಕೇಳುತ್ತಿದ್ದ ಎಲೀಹು ಇದನ್ನು ಸರಿಪಡಿಸಿದನು. ಮನುಷ್ಯನು ಒಳ್ಳೆಯವನೆಂದು ಸಾಬೀತಾಗುವುದಕ್ಕಿಂತಲೂ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವೇ ಹೆಚ್ಚು ಪ್ರಾಮುಖ್ಯವೆಂದು ಗ್ರಹಿಸದ ಯೋಬನಿಗೆ ಅವನ ತಪ್ಪನ್ನು ಎಲೀಹು ಮನಗಾಣಿಸಿದನು. ಮತ್ತು ಯೋಬನ ಆ ಮೂವರು ಸುಳ್ಳು ಸ್ನೇಹಿತರು ಹೇಳಿದ್ದನ್ನು ಸಹ ಆಕ್ಷೇಪಿಸಿ ಅವರನ್ನು ಖಂಡಿಸಿದನು.

ಅನಂತರ, ಯೆಹೋವ ದೇವರು ಯೋಬನೊಂದಿಗೆ ಮಾತಾಡಿ ಅವನ ಯೋಚನಾಧಾಟಿಯನ್ನು ಸರಿಪಡಿಸಿದನು. ಯೆಹೋವನು ತನ್ನ ಸೃಷ್ಟಿಯ ಕಾರ್ಯವೈಚಿತ್ರ್ಯಗಳಿಗೆ ಯೋಬನ ಗಮನ ಸೆಳೆದು ಮಹೋನ್ನತ ದೇವರ ಮುಂದೆ ಮಾನವನೆಷ್ಟು ಅಲ್ಪನೆಂದು ತೋರಿಸಿಕೊಟ್ಟನು. ಆಗ ಯೋಬನು ದೀನ ಸ್ವಭಾವದಿಂದ ತನ್ನನ್ನು ಸರಿಪಡಿಸಿಕೊಂಡನು. “ಕೋಮಲವಾದ ಮಮತೆಯುಳ್ಳವನೂ ಕರುಣಾಳುವೂ” ಆಗಿರುವ ಯೆಹೋವನು ಯೋಬನನ್ನು ರೋಗಮುಕ್ತಗೊಳಿಸಿ, ಅವನಿಗೆ ಮುಂಚಿಗಿಂತಲೂ ಎರಡರಷ್ಟು ಸಿರಿಸಂಪತ್ತನ್ನು ಕೊಟ್ಟು ಹತ್ತು ಮಕ್ಕಳನ್ನು ಅನುಗ್ರಹಿಸಿದನು. (ಯಾಕೋಬ 5:11) ಹೀಗೆ, ಬಹು ಕಷ್ಟನಷ್ಟಗಳನ್ನು ಅನುಭವಿಸಿದಾಗಲೂ ಯೋಬನು ಯೆಹೋವನಿಗೆ ಸಮಗ್ರತೆಯನ್ನು ತೋರಿಸಿದನು. ಈ ಮೂಲಕ, ಕಷ್ಟಕೋಟಲೆಗಳ ಪರೀಕ್ಷೆ ಬಂದಾಗ ಮಾನವರು ದೇವರಿಗೆ ನಂಬಿಗಸ್ತರಾಗಿ ಉಳಿಯುವುದಿಲ್ಲ ಎಂಬ ಸೈತಾನನ ವಾದವನ್ನು ಸುಳ್ಳೆಂದು ರುಜುಪಡಿಸಿದನು.

ಯೋಬ ಪುಸ್ತಕದ ಮೇಲೆ ಆಧಾರಿತವಾಗಿದೆ.