ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 8

ಯಾರಾದರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೆ ಏನು ಮಾಡಲಿ?

ಯಾರಾದರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದರೆ ಏನು ಮಾಡಲಿ?

ಪ್ರಾಮುಖ್ಯವೇಕೆ?

ಪ್ರತೀ ವರ್ಷ ಲಕ್ಷಗಟ್ಟಲೆ ಜನರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಹೆಚ್ಚಾಗಿ ಇದಕ್ಕೆ ಯುವಜನರೇ ಗುರಿ ಆಗುತ್ತಿದ್ದಾರೆ.

ನೀವು ಈ ಜಾಗದಲ್ಲಿ ಇದ್ದಿದ್ದರೆ . . .

ಯಾರೋ ಒಬ್ಬ ಇದ್ದಕ್ಕಿದ್ದಂತೆ ಬಂದು ಆ್ಯನೆಟ್‌ ಎಂಬ ಹುಡುಗಿಯನ್ನು ನೆಲಕ್ಕೆ ತಳ್ಳಿದ. ಅವಳು ಹೇಳುತ್ತಾಳೆ: “ಅವನಿಂದ ತಪ್ಪಿಸಿಕೊಳ್ಳೋಕೆ ನನ್ನ ಕೈಲಾಗಿದ್ದನ್ನೆಲ್ಲಾ ಮಾಡಿದೆ. ಕಿರುಚಿದೆ, ಆದ್ರೆ ಬಾಯಿಂದ ಬರೀ ಗಾಳಿ ಬಂತು ಬಿಟ್ಟರೆ ಶಬ್ದನೇ ಬರಲಿಲ್ಲ. ಅವನನ್ನು ತಳ್ಳಿದೆ, ಒದ್ದೆ, ಗುದ್ದಿದೆ, ಪರಚಿದೆ. ಅಷ್ಟರಲ್ಲಿ ಅವನು ಚಾಕೂ ತಗೊಂಡು ಚುಚ್ಚಿಬಿಟ್ಟ. ಆಗ ನನ್ನ ಕೈಕಾಲೇ ಓಡಲಿಲ್ಲ, ಏನು ಮಾಡಬೇಕು ಅಂತಾನೇ ಗೊತ್ತಾಗಲಿಲ್ಲ.”

ಇಂಥ ಒಂದು ಸನ್ನಿವೇಶದಲ್ಲಿ ನೀವು ಏನು ಮಾಡುತ್ತಿದ್ದಿರಿ?

ಸ್ವಲ್ಪ ಯೋಚಿಸಿ!

ಇಂಥ ಪರಿಸ್ಥಿತಿ ಬಂದರೆ ಏನು ಮಾಡಬೇಕು ಅಂತ ನೀವು ಈಗಾಗಲೇ ಯೋಚಿಸಿರಬಹುದು. ಆದರೂ ಇಂಥ ಅನಾಹುತಗಳು ಆಗಬಹುದು. ಕೆಲವೊಮ್ಮೆ ರಾತ್ರಿ ಒಬ್ಬರೇ ಪ್ರಯಾಣ ಮಾಡುವಾಗ ಎಷ್ಟೇ ಎಚ್ಚರ ವಹಿಸಿದರೂ ಇಂಥ ಕೆಟ್ಟ ವಿಷಯಗಳು ನಡೆದುಬಿಡುತ್ತೆ. ಅದಕ್ಕೆ ಬೈಬಲ್‌ ಹೇಳುವುದು: ‘ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಪ್ರವೀಣರಿಗೆ ದಯೆ ದೊರೆಯದು; ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.’—ಪ್ರಸಂಗಿ 9:11.

ಆ್ಯನೆಟ್‍ಳಂತೆ ಇನ್ನು ಎಷ್ಟೋ ಯುವತಿಯರು ಅಪರಿಚಿತರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಇನ್ನು ಕೆಲವರಿಗೆ ಪರಿಚಯ ಇರುವವರೇ ಅಥವಾ ಕುಟುಂಬ ಸದಸ್ಯರೊಬ್ಬರೇ ದೌರ್ಜನ್ಯ ಮಾಡಿದ್ದಾರೆ. ಉದಾರಣೆಗೆ, ನತಾಲಿ ಎಂಬ ಹುಡುಗಿಗೆ 10 ವಯಸ್ಸಿದ್ದಾಗ ಪಕ್ಕದ ಮನೆಯ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದ. ನತಾಲಿ ಹೇಳುತ್ತಾಳೆ: “ನನಗೆ ಎಷ್ಟು ಭಯ, ನಾಚಿಕೆ ಆಯಿತು ಅಂದರೆ ಆರಂಭದಲ್ಲಿ ನಾನು ಇದರ ಬಗ್ಗೆ ಯಾರಿಗೂ ಹೇಳಿರಲಿಲ್ಲ.”

ನಿಮ್ಮದೇನೂ ತಪ್ಪಿಲ್ಲ

ಆ್ಯನೆಟ್‌ಗೆ ಇವತ್ತಿಗೂ ಅವಳ ಮನಸ್ಸು ಚುಚ್ಚುತ್ತದೆ. “ಆ ರಾತ್ರಿ ನಡೆದದ್ದೆಲ್ಲ ನನಗೆ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅವನಿಂದ ತಪ್ಪಿಸಿಕೊಳ್ಳೋಕೆ ನಾನು ಇನ್ನೂ ಏನಾದರೂ ಮಾಡಬೇಕಿತ್ತು ಅಂತ ಮನಸ್ಸು ಹೇಳುತ್ತಿರುತ್ತೆ. ಆದರೆ ನಿಜ ಹೇಳ್ತೀನಿ, ಅವನು ಚಾಕೂವಿನಿಂದ ಚುಚ್ಚಿದ ಮೇಲೆ ಭಯದಲ್ಲಿ ನಾನು ಕಲ್ಲಿನ ಹಾಗೇ ಆಗಿಬಿಟ್ಟಿದ್ದೆ, ಏನೂ ಮಾಡಕ್ಕಾಗಿಲ್ಲ ನನಗೆ. ಆದರೆ ನಾನು ಏನಾದರೂ ಮಾಡಬೇಕಿತ್ತು ಅಂತ ಮನಸ್ಸು ಚುಚ್ಚುತ್ತಿತ್ತು” ಎನ್ನುತ್ತಾಳೆ ಆ್ಯನೆಟ್‌.

ನತಾಲಿಗೂ ಅಪರಾಧಿಭಾವ ಕಾಡುತ್ತಿತ್ತು. ಅವಳು ಹೇಳುವುದು: “ನಾನು ಅವನನ್ನು ತುಂಬ ನಂಬಿಬಿಟ್ಟೆ. ಹೊರಗಡೆ ಆಟ ಆಡುವಾಗ ನನಗೂ ತಂಗಿಗೂ ಯಾವಾಗಲೂ ಒಟ್ಟಿಗೆ ಇದ್ದು ಆಡಿ ಅಂತ ಅಪ್ಪ ಅಮ್ಮ ಹೇಳುತ್ತಿದ್ದರು. ನಾನು ಅವರ ಮಾತನ್ನ ಕೇಳಲಿಲ್ಲ. ನಾನು ಒಬ್ಬಳೇ ಇದ್ದಿದ್ದರಿಂದಲೇ ಹೀಗಾಯಿತು. ನನಗೆ ಮಾತ್ರ ಅಲ್ಲ ನನ್ನ ಅಪ್ಪ ಅಮ್ಮಗೂ ನೋವು ತಂದೆ. ಇದಕ್ಕೆಲ್ಲ ನಾನೇ ಕಾರಣ ಅಂತ ಮನಸ್ಸು ಚುಚ್ಚುತ್ತಿತ್ತು.”

ಆ್ಯನೆಟ್‌ ಮತ್ತು ನತಾಲಿ ಥರ ನಿಮಗೂ ನಿಮ್ಮ ಮನಸ್ಸು ಚುಚ್ಚುತ್ತಿದೆಯಾ? ಒಂದು ವಿಷಯ ಮನಸ್ಸಲ್ಲಿ ಇಟ್ಟುಕೊಳ್ಳಿ, ನಿಮ್ಮ ಅತ್ಯಾಚಾರಕ್ಕೆ ನೀವು ಕಾರಣರಲ್ಲ. ಹುಡುಗರು ಅಂದ ಮೇಲೆ ಇದೆಲ್ಲ ಸಾಮಾನ್ಯ ಅಂತನೋ ಹುಡುಗಿಯರದ್ದೇ ತಪ್ಪು ಅಂತನೋ ಕೆಲವರು ನೆಪ ಕೊಡುತ್ತಾರೆ. ಏನೇ ಆದರೂ ಅತ್ಯಾಚಾರ ಅನ್ನೋದು ತಪ್ಪೇ. ನಿಮ್ಮ ಮೇಲೆ ಅತ್ಯಾಚಾರ ನಡೆದಿದ್ದರೆ ಆ ನೀಚ ಕೃತ್ಯಕ್ಕೆ ನೀವು ಹೊಣೆಯಲ್ಲ!

ನಿಮ್ಮದೇನೂ ತಪ್ಪಿಲ್ಲ ಅಂತ ಹೇಳಿದರೂ ಅದನ್ನು ಒಪ್ಪಿಕೊಳ್ಳಲು ನಿಮಗೆ ಕಷ್ಟವಾಗಬಹುದು. ಕೆಲವರು ಆಗಿದ್ದನ್ನು ಮರೆಯೋಕೆ ಆಗದೆ ಕೊರಗುತ್ತಾರೆ. ಇನ್ನು ಕೆಲವರ ಮನಸ್ಸು ಚುಚ್ಚುತ್ತಾ ಇರುತ್ತೆ ಅಥವಾ ಇನ್ನೂ ಕೆಲವೊಂದು ನಕಾರಾತ್ಮಕ ಭಾವನೆಗಳು ಕಾಡುತ್ತಿರುತ್ತೆ. ಆಗಿರುವುದನ್ನು ಯಾರಿಗೂ ಹೇಳದಿದ್ದರೆ ಯಾರಿಗೆ ಪ್ರಯೋಜನ? ನಿಮಗಾ? ಆ ವ್ಯಕ್ತಿಗಾ? ನೀವು ಮುಚ್ಚಿಡದೇ ಬೇರೆಯವರಿಗೆ ಹೇಳಬೇಕು. ಯಾಕೆ ಅಂತ ಕೆಲವು ಕಾರಣಗಳನ್ನು ಕೆಳಗೆ ಓದಿ.

ಮುಚ್ಚಿಡಬೇಡಿ

ಯೋಬ ತುಂಬಾ ಕಷ್ಟದಲ್ಲಿ ಮುಳುಗಿದ್ದಾಗ ಹೇಳಿದ್ದು, “ಮನೋವ್ಯಥೆಯಿಂದ ನುಡಿಯುವೆನು.” (ಯೋಬ 10:1) ನೀವು ಕೂಡ ಹೀಗೆ ಮಾಡಬಹುದು. ನೀವು ನಂಬುವ ಒಬ್ಬರ ಹತ್ತಿರ ಮನಸ್ಸು ಬಿಚ್ಚಿ ಮಾತಾಡಿ, ನಿಮ್ಮ ಕಷ್ಟನಾ ಹೇಳಿಕೊಳ್ಳಿ. ಅವರು ನಿಮ್ಮ ಭಾವನೆಗಳನ್ನು ಹತೋಟಿಗೆ ತರಲು ಮತ್ತು ನೋವನ್ನು ಮರೆಯಲು ಸಹಾಯ ಮಾಡುತ್ತಾರೆ.

ನಿಮ್ಮ ಮನಸ್ಸಿನ ಭಾವನೆಗಳನ್ನು ನೀವು ಒಬ್ಬರೇ ಹೊತ್ತುಕೊಳ್ಳಲು ಆಗದಿದ್ದಾಗ ಬೇರೆಯವರ ಹತ್ತಿರ ಹಂಚಿಕೊಂಡು ಭಾರ ಕಡಿಮೆ ಮಾಡಿಕೊಳ್ಳಿ.

ಆ್ಯನೆಟ್‌ ಕೂಡ ಇದನ್ನೇ ಮಾಡಿದಳು. ಅದರಿಂದ ಅವಳಿಗೆ ಪ್ರಯೋಜನ ಕೂಡ ಆಯಿತು. “ನನ್ನ ಒಬ್ಬ ಆಪ್ತ ಸ್ನೇಹಿತೆಯ ಹತ್ತಿರ ಮಾತಾಡಿದೆ. ಅವಳು ಸಭೆಯಲ್ಲಿರೋ ಹಿರಿಯರ ಹತ್ತಿರ ಮಾತಾಡು ಅಂತ ಹೇಳಿದಳು. ನಾನು ಹೋಗಿ ಮಾತಾಡಿದೆ. ಒಂದು ಸಲ ಅಲ್ಲ, ಸುಮಾರು ಸಾರಿ ನನ್ನ ಜೊತೆ ಕೂತು ಸಹೋದರರು ಮಾತಾಡಿದ್ರು. ನನ್ನದೇನೂ ತಪ್ಪಿಲ್ಲ ಅಂತ ಸಮಾಧಾನ ಮಾಡಿದರು. ಅದೇ ನನಗೆ ಬೇಕಾಗಿತ್ತು.”

ನತಾಲಿ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಅವಳ ಅಪ್ಪಅಮ್ಮನ ಹತ್ತಿರ ಹೇಳಿದಳು. ನತಾಲಿ ಹೇಳುವುದು: “ಅಪ್ಪಅಮ್ಮ ಅದರ ಬಗ್ಗೆ ಮನಸ್ಸು ಬಿಚ್ಚಿ ಮಾತಾಡೋಕೆ ಹೇಳಿದರು. ಹೀಗೆ ಮಾತಾಡಿದ್ದರಿಂದ ನನ್ನ ದುಃಖ, ಕೋಪ ಎಲ್ಲಾ ಕಮ್ಮಿ ಆಯಿತು.”

ನತಾಲಿಗೆ ಪ್ರಾರ್ಥನೆಯಿಂದ ಕೂಡ ಸಹಾಯ ಆಯಿತು. “ದೇವರ ಹತ್ತಿರ ಮನಬಿಚ್ಚಿ ಮಾತಾಡಿದೆ. ಯಾರ ಹತ್ತಿರನೂ ಮಾತಾಡೋಕೆ ಆಗದೆ ಸಂಕಟ ಪಡುತ್ತಿದ್ದ ಸಮಯದಲ್ಲಿ ನಾನು ದೇವರ ಹತ್ತಿರ ಮುಕ್ತವಾಗಿ ಮಾತಾಡುತ್ತಿದ್ದೆ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತಿತ್ತು” ಅಂತ ಹೇಳುತ್ತಾಳೆ.

ವಾಸಿ ಆಗುವುದಕ್ಕೂ ಸಮಯ ಹಿಡಿಯುತ್ತೆ ಅನ್ನುವುದನ್ನು ಮರೆಯಬೇಡಿ. (ಪ್ರಸಂಗಿ 3:3) ನಿಮ್ಮ ಆರೋಗ್ಯ ನೋಡಿಕೊಳ್ಳಿ. ಸಂತೋಷವಾಗಿರಲು ಪ್ರಯತ್ನಿಸಿ. ಚೆನ್ನಾಗಿ ನಿದ್ದೆ ಮಾಡಿ. ಎಲ್ಲದಕ್ಕಿಂತ ಹೆಚ್ಚಾಗಿ, ಸಾಂತ್ವನ ಕೊಡುವ ದೇವರಾದ ಯೆಹೋವ ಮೇಲೆ ಭರವಸೆ ಇಡಿ.—2 ಕೊರಿಂಥ 1:3, 4.

ನಿಮಗೆ ಡೇಟಿಂಗ್‌ ಮಾಡುವಷ್ಟು ವಯಸ್ಸಾಗಿದ್ಯಾ?

ನೀವು ಡೇಟಿಂಗ್‌ ಮಾಡುತ್ತಿರುವಾಗ ನಿಮ್ಮ ಬಾಯ್‍ಫ್ರೆಂಡ್ ಮಿತಿ ಮೀರುವುದಾದರೆ “ನನಗಿಷ್ಟ ಇಲ್ಲ! ಬೇಡ!” ಅಥವಾ “ಕೈ ತೆಗಿ” ಅಂತ ಧೈರ್ಯವಾಗಿ ಹೇಳಿ. ನಿಮ್ಮ ಬಾಯ್‍ಫ್ರೆಂಡ್ ನಿಮ್ಮನ್ನು ಬಿಟ್ಟುಬಿಡಬಹುದು ಅನ್ನುವ ಭಯದಲ್ಲಿ ಎಲ್ಲದ್ದಕ್ಕೂ ತಲೆಯಾಡಿಸಬೇಡಿ. ಇಂಥ ವಿಷಯಕ್ಕೆ ಅವನು ನಿಮ್ಮನ್ನು ಬಿಟ್ಟು ಹೋದರೆ ಒಳ್ಳೇದೇ ಆಯಿತು! ನಿಮಗೆ ಬೇಕಾಗಿರೋದು ನಿಮ್ಮ ದೇಹಕ್ಕೂ ನಿಮ್ಮ ಆದರ್ಶಗಳಿಗೂ ಗೌರವ ಕೊಡುವ ವ್ಯಕ್ತಿ!

ಇದು ಲೈಂಗಿಕ ಕಿರುಕುಳನಾ?

“ಸ್ಕೂಲಲ್ಲಿ ಹುಡುಗರು ನನ್ನ ಬ್ರಾ ಎಳೆದು ಕೆಟ್ಟ ಕೆಟ್ಟದಾಗಿ ಮಾತಾಡುತ್ತಿದ್ದರು. ನಮ್ಮ ಜೊತೆ ಸೆಕ್ಸ್‌ ಮಾಡಿದರೆ ತುಂಬ ಚೆನ್ನಾಗಿರುತ್ತೆ ಅಂತ ಹೇಳುತ್ತಿದ್ದರು.”—ಕೊರೆಟ್ಟಾ.

ಆ ಹುಡುಗರು ಏನು ಮಾಡುತ್ತಿದ್ದರು?

  1. ಗೇಲಿ ಮಾಡುತ್ತಿದ್ರಾ?

  2. ಚೆಲ್ಲಾಟ ಆಡುತ್ತಿದ್ರಾ?

  3. ಲೈಂಗಿಕ ಕಿರುಕುಳ ಕೊಡುತ್ತಿದ್ರಾ?

“ಬಸ್ಸಲ್ಲಿ ಒಬ್ಬ ಅಸಭ್ಯವಾಗಿ ಮಾತಾಡುತ್ತಾ ನನ್ನ ಕೈ ಎಳೆದ. ನಾನು ಅವನ ಕೈಗೆ ಹೊಡೆದು ದೂರ ಹೋಗೋಕೆ ಹೇಳಿದೆ. ಆಗ ನಾನು ಏನೋ ಮಾಡಬಾರದ್ದನ್ನ ಮಾಡಿದೆ ಅನ್ನೋ ಥರ ಅವನು ನನ್ನನ್ನು ನೋಡಿದ.”—ಕ್ಯಾಂಡಿಸ್‌.

ಈ ಹುಡುಗ ಏನು ಮಾಡುತ್ತಿದ್ದ?

  1. ಗೇಲಿ ಮಾಡುತ್ತಿದ್ರಾ?

  2. ಚೆಲ್ಲಾಟ ಆಡುತ್ತಿದ್ರಾ?

  3. ಲೈಂಗಿಕ ಕಿರುಕುಳ ಕೊಡುತ್ತಿದ್ರಾ?

“ಹೋದ ವರ್ಷ ಒಬ್ಬ ಹುಡುಗ ‘ನೀನು ನನಗೆ ಇಷ್ಟ’ ಅಂತ ಹೇಳಿ ಸುತ್ತಾಡೋಕೆ ಕರೆಯುತ್ತಿದ್ದ. ನನಗಿಷ್ಟ ಇಲ್ಲ ಅಂತ ಹೇಳಿದ್ದರೂ ಪೀಡಿಸುತ್ತಿದ್ದ. ಕೆಲವೊಮ್ಮೆ, ಹೆಗಲು ಸವರುತ್ತಿದ್ದ. ಮುಟ್ಟಬೇಡ ಅಂತ ಹೇಳಿದ್ರೂ ಅದನ್ನೇ ಮಾಡುತ್ತಿದ್ದ. ಒಂದಿನ ಅಂತೂ ನಾನು ಚಪ್ಪಲಿ ಹಾಕೋಕೆ ಅಂತ ಬಗ್ಗಿದಾಗ ಹಿಂದೆ ಹೊಡೆದ.”—ಬೆಥಾನಿ.

ಈ ಹುಡುಗ ಏನು ಮಾಡುತ್ತಿದ್ದ?

  1. ಗೇಲಿ ಮಾಡುತ್ತಿದ್ರಾ?

  2. ಚೆಲ್ಲಾಟ ಆಡುತ್ತಿದ್ರಾ?

  3. ಲೈಂಗಿಕ ಕಿರುಕುಳ ಕೊಡುತ್ತಿದ್ರಾ?

ಈ ಮೂರೂ ಪ್ರಶ್ನೆಗಳಿಗೂ ಉತ್ತರ C.

ಗೇಲಿ ಮಾಡುವುದಕ್ಕೂ ಚೆಲ್ಲಾಟ ಆಡುವುದಕ್ಕೂ ಲೈಂಗಿಕ ಕಿರುಕುಳಕ್ಕೂ ಇರುವ ವ್ಯತ್ಯಾಸ ಏನು?

ಲೈಂಗಿಕ ಕಿರುಕುಳ ಅಂದರೆ ಇಬ್ಬರೂ ಇಷ್ಟಪಟ್ಟು ಮಾಡುವುದಲ್ಲ. ಒಬ್ಬ ವ್ಯಕ್ತಿಗೆ ಅದು ಇಷ್ಟ ಇಲ್ಲ, ಬೇಡ ಅಂತ ಹೇಳಿದರೂ ಮಾಡುತ್ತಾ ಇರುವುದು.

ಕಿರುಕುಳ ಒಂದು ದೊಡ್ಡ ತಪ್ಪು. ಇದು ಲೈಂಗಿಕ ದೌರ್ಜನ್ಯಕ್ಕೆ ನಡೆಸುತ್ತದೆ.