ಅರಣ್ಯಕಾಂಡ 15:1-41

  • ಅರ್ಪಣೆಗಳ ಬಗ್ಗೆ ನಿಯಮಗಳು (1-21)

    • ಇಸ್ರಾಯೇಲ್ಯರಿಗೂ ವಿದೇಶಿಯರಿಗೂ ಒಂದೇ ನಿಯಮ (15, 16)

  • ಗೊತ್ತಿಲ್ಲದೆ ಮಾಡಿದ ಪಾಪಕ್ಕಾಗಿ ಅರ್ಪಣೆಗಳು (22-29)

  • ಬೇಕುಬೇಕಂತಾನೇ ಪಾಪ ಮಾಡಿದ್ರೆ ಸಿಗೋ ಶಿಕ್ಷೆ (30, 31)

  • ಸಬ್ಬತ್‌ ನಿಯಮ ಮುರಿದವನನ್ನ ಸಾಯಿಸಿದ್ರು (32-36)

  • ಬಟ್ಟೆಗಳಿಗೆ ಎಳೆಎಳೆಯಾದ ಅಂಚು ಇರಬೇಕು (37-41)

15  ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ  “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶಕ್ಕೆ+ ಹೋದ್ಮೇಲೆ  ಯೆಹೋವನಿಗೆ ದನ-ಹೋರಿ ಅಥವಾ ಆಡು-ಕುರಿಗಳನ್ನ ಸರ್ವಾಂಗಹೋಮ ಬಲಿಯಾಗಿ+ ವಿಶೇಷ ಹರಕೆ ತೀರಿಸೋ ಬಲಿಯಾಗಿ ಸ್ವಇಷ್ಟದ ಕಾಣಿಕೆಯಾಗಿ+ ಅಥವಾ ವರ್ಷದ ಬೇರೆಬೇರೆ ಕಾಲಗಳಲ್ಲಿ ಆಚರಿಸೋ ಹಬ್ಬಗಳಲ್ಲಿ+ ಬಲಿಯಾಗಿ ಬೆಂಕಿಯಲ್ಲಿ ಅರ್ಪಿಸಿ ಅದ್ರ ಸುವಾಸನೆಯಿಂದ ಯೆಹೋವನನ್ನ ಖುಷಿ* ಪಡಿಸೋಕೆ+ ಇಷ್ಟಪಟ್ರೆ  ನಿಮ್ಮ ಬಲಿ ಜೊತೆ ಯೆಹೋವನಿಗೆ ನುಣ್ಣಗಿನ ಹಿಟ್ಟನ್ನ ಧಾನ್ಯ ಅರ್ಪಣೆಯಾಗಿ ಕೊಡಬೇಕು.+ ಆ ಹಿಟ್ಟು ಒಂದು ಏಫಾ* ಅಳತೆಯ ಹತ್ತರಲ್ಲಿ ಒಂದು ಭಾಗದಷ್ಟು ಇರಬೇಕು. ಅದಕ್ಕೆ ಒಂದು ಹಿನ್‌* ಅಳತೆಯ ನಾಲ್ಕನೇ ಒಂದು ಭಾಗದಷ್ಟು* ಎಣ್ಣೆ ಬೆರೆಸಿ ಕೊಡಬೇಕು.  ನೀವು ಸರ್ವಾಂಗಹೋಮ ಬಲಿ ಕೊಡುವಾಗೆಲ್ಲ ಅಥವಾ ಗಂಡು ಕುರಿಮರಿಯನ್ನ ಬಲಿಯಾಗಿ ಕೊಡುವಾಗೆಲ್ಲ ಒಂದು ಹಿನ್‌ ಅಳತೆಯ ನಾಲ್ಕನೇ ಒಂದು ಭಾಗದಷ್ಟು ದ್ರಾಕ್ಷಾಮದ್ಯವನ್ನ ಪಾನ ಅರ್ಪಣೆಯಾಗಿ ಕೊಡಬೇಕು.+  ಒಂದು ಟಗರನ್ನ ಕೊಡುವಾಗ ಅದ್ರ ಜೊತೆ ಧಾನ್ಯ ಅರ್ಪಣೆ ಕೊಡಬೇಕು. ಆ ಧಾನ್ಯ ಅರ್ಪಣೆಗಾಗಿ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು ನುಣ್ಣಗಿನ ಹಿಟ್ಟಿಗೆ ಒಂದು ಹಿನ್‌ ಅಳತೆಯ ಮೂರನೇ ಒಂದು ಭಾಗದಷ್ಟು ಎಣ್ಣೆ ಬೆರೆಸಿ ಕೊಡಬೇಕು.  ಅಷ್ಟೇ ಅಲ್ಲ ಒಂದು ಹಿನ್‌ ಅಳತೆಯ ಮೂರನೇ ಒಂದು ಭಾಗದಷ್ಟು ದ್ರಾಕ್ಷಾಮದ್ಯವನ್ನ ಪಾನ ಅರ್ಪಣೆಯಾಗಿ ಕೊಡಬೇಕು. ಈ ಬಲಿಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ.  ಆದ್ರೆ ನೀವು ಒಂದು ಹೋರಿನ ಸರ್ವಾಂಗಹೋಮ ಬಲಿಯಾಗಿ+ ಅಥವಾ ವಿಶೇಷ ಹರಕೆ+ ತೀರಿಸೋ ಬಲಿಯಾಗಿ ಅಥವಾ ಸಮಾಧಾನ ಬಲಿಯಾಗಿ ಯೆಹೋವನಿಗೆ ಅರ್ಪಿಸೋದಾದ್ರೆ+  ಆ ಹೋರಿ ಜೊತೆ ಧಾನ್ಯ ಅರ್ಪಣೆನೂ ಕೊಡಬೇಕು.+ ಅದಕ್ಕಾಗಿ ಒಂದು ಏಫಾ ಅಳತೆಯ ಹತ್ತರಲ್ಲಿ ಮೂರು ಭಾಗದಷ್ಟು ನುಣ್ಣಗಿನ ಹಿಟ್ಟಿಗೆ ಅರ್ಧ ಹಿನ್‌ ಅಳತೆಯಷ್ಟು ಎಣ್ಣೆ ಬೆರೆಸಿ ಕೊಡಬೇಕು. 10  ಅಷ್ಟೇ ಅಲ್ಲ ಅರ್ಧ ಹಿನ್‌ ಅಳತೆಯಷ್ಟು ದ್ರಾಕ್ಷಾಮದ್ಯವನ್ನ ಪಾನ ಅರ್ಪಣೆಯಾಗಿ ಕೊಡಬೇಕು.+ ಇದು ಬೆಂಕಿಯಲ್ಲಿ ಅರ್ಪಿಸೋ ಬಲಿ. ಈ ಬಲಿಯ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. 11  ಎತ್ತು, ಟಗರು, ಗಂಡು ಕುರಿಮರಿ ಅಥವಾ ಆಡುಗಳನ್ನ ಅರ್ಪಿಸೋವಾಗೆಲ್ಲ ಈ ಅರ್ಪಣೆಗಳನ್ನ ಕೊಡಬೇಕು. 12  ನೀವು ಎಷ್ಟೇ ಪ್ರಾಣಿಗಳನ್ನ ಬಲಿಯಾಗಿ ಅರ್ಪಿಸಿದ್ರೂ ಪ್ರತಿಯೊಂದು ಪ್ರಾಣಿ ಜೊತೆ ಧಾನ್ಯ ಅರ್ಪಣೆನೂ ಪಾನ ಅರ್ಪಣೆನೂ ಕೊಡಬೇಕು. 13  ಇಸ್ರಾಯೇಲ್ಯರಾದ ನಿಮ್ಮಲ್ಲಿ ಪ್ರತಿಯೊಬ್ಬ ಇದೇ ತರ ಪ್ರಾಣಿಯನ್ನ ಬೆಂಕಿಯಲ್ಲಿ ಅರ್ಪಿಸಬೇಕು. ಅದ್ರ ಸುವಾಸನೆಯಿಂದ ಯೆಹೋವನಿಗೆ ಖುಷಿ* ಆಗುತ್ತೆ. 14  ನಿಮ್ಮ ಮಧ್ಯ ವಾಸಿಸ್ತಿರೋ ವಿದೇಶಿ ಅಥವಾ ತುಂಬ ವರ್ಷಗಳಿಂದ ನಿಮ್ಮ ಮಧ್ಯ ಇರೋ ವಿದೇಶಿ ಬೆಂಕಿಯಲ್ಲಿ ಬಲಿ ಅರ್ಪಿಸಿ ಅದ್ರ ಸುವಾಸನೆಯಿಂದ ಯೆಹೋವನನ್ನ ಖುಷಿ* ಪಡಿಸೋಕೆ ಇಷ್ಟಪಟ್ರೆ ಅವನು ಕೂಡ ಬಲಿನ ನೀವು ಅರ್ಪಿಸೋ ಹಾಗೇ ಅರ್ಪಿಸಬೇಕು.+ 15  ಇಸ್ರಾಯೇಲ್‌ ಸಭೆಯವರಾದ ನಿಮಗೂ ನಿಮ್ಮ ಮಧ್ಯ ವಾಸ ಮಾಡ್ತಿರೋ ವಿದೇಶಿಯರಿಗೂ ಒಂದೇ ನಿಯಮ. ಇದನ್ನ ನೀವು ಎಲ್ಲ ಪೀಳಿಗೆಯವರು ಪಾಲಿಸಬೇಕು. ನೀವೂ ವಿದೇಶಿಯರೂ ಯೆಹೋವನ ದೃಷ್ಟಿಯಲ್ಲಿ ಸಮಾನರು.+ 16  ನಿಮಗೂ ನಿಮ್ಮ ಮಧ್ಯ ವಾಸಿಸ್ತಿರೋ ವಿದೇಶಿಯರಿಗೂ ಒಂದೇ ನಿಯಮ, ಒಂದೇ ತೀರ್ಪು ಇರಬೇಕು.’” 17  ಯೆಹೋವ ಮೋಶೆಗೆ ಹೀಗಂದನು: 18  “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶದಲ್ಲಿ 19  ನಿಮಗಾಗಿ ಬೆಳೆ ಬೆಳೆಸಿದಾಗ+ ಅದ್ರಲ್ಲಿ ಸ್ವಲ್ಪ ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. 20  ನೀವು ದವಸಧಾನ್ಯದ ಮೊದಲ ಬೆಳೆಯಲ್ಲಿ+ ಸ್ವಲ್ಪ ನುಚ್ಚು ನುಚ್ಚಾಗಿ ಕುಟ್ಟಿ ಅದ್ರಿಂದ ಬಳೆ ಆಕಾರದ ರೊಟ್ಟಿಗಳನ್ನ ಮಾಡಿ ಕಾಣಿಕೆಯಾಗಿ ಕೊಡಬೇಕು. ಕಣದಲ್ಲಿನ ಬೆಳೆಯಲ್ಲಿ ಸ್ವಲ್ಪವನ್ನ ಯಾವ ವಿಧದಲ್ಲಿ ಕಾಣಿಕೆಯಾಗಿ ಅರ್ಪಿಸ್ತೀರೋ ಅದೇ ವಿಧದಲ್ಲಿ ಆ ರೊಟ್ಟಿಗಳನ್ನ ಸಹ ಅರ್ಪಿಸಬೇಕು. 21  ದವಸಧಾನ್ಯದ ಮೊದಲ ಬೆಳೆಯಲ್ಲಿ ಮೊದ್ಲು ಕುಟ್ಟಿ ಮಾಡಿದ ನುಚ್ಚಿನಲ್ಲಿ ಸ್ವಲ್ಪ ನೀವು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ನಿಮ್ಮ ಪೀಳಿಗೆಯವರೆಲ್ಲ ಇದನ್ನ ಪಾಲಿಸಬೇಕು. 22  ನೀವು ಏನಾದ್ರೂ ತಪ್ಪು ಮಾಡಿದ್ರೆ ಯೆಹೋವ ಮೋಶೆ ಮೂಲಕ ಕೊಟ್ಟ ಈ ಆಜ್ಞೆಗಳನ್ನ ಪಾಲಿಸದೇ ಇದ್ರೆ 23  ಅಂದ್ರೆ ಯೆಹೋವ ನಿಮಗೆ ಕೊಟ್ಟಿರೋ ಮತ್ತು ಮೋಶೆ ಮೂಲಕ ಯೆಹೋವ ಆಜ್ಞೆಗಳನ್ನ ಕೊಟ್ಟ ದಿನದಿಂದ ನಿಮ್ಮ ವಂಶದವರ ಕಾಲದ ತನಕ ಅನ್ವಯವಾಗೋ ನಿಯಮಗಳನ್ನ ಪಾಲಿಸದೇ ಇದ್ರೆ ಹೀಗೆ ಮಾಡಬೇಕು: 24  ಎಲ್ಲ ಇಸ್ರಾಯೇಲ್ಯರು ಆಕಸ್ಮಿಕವಾಗಿ ತಿಳಿಯದೆ ತಪ್ಪು ಮಾಡಿದ್ರೆ, ಅದ್ರ ಬಗ್ಗೆ ಗೊತ್ತಾದಾಗ ಎಲ್ರೂ ಒಂದು ಎತ್ತನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಅದ್ರ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಅದ್ರ ಜೊತೆ ಧಾನ್ಯ ಅರ್ಪಣೆಯನ್ನ ಪಾನ ಅರ್ಪಣೆಯನ್ನ ಯಾವಾಗ್ಲೂ ಅರ್ಪಿಸಬೇಕಾದ ಕ್ರಮದಲ್ಲೇ ಅರ್ಪಿಸಬೇಕು.+ ಅಷ್ಟೇ ಅಲ್ಲ ಒಂದು ಆಡುಮರಿನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು.+ 25  ಪುರೋಹಿತ ಎಲ್ಲ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವ್ರನ್ನ ದೇವರು ಕ್ಷಮಿಸ್ತಾನೆ.+ ಅವರು ಗೊತ್ತಿಲ್ಲದೆ ಪಾಪ ಮಾಡಿದ್ರಿಂದ ಯೆಹೋವನಿಗೆ ಬೆಂಕಿಯಲ್ಲಿ ಬಲಿ ಅರ್ಪಿಸಿದ್ರಿಂದ, ತಮ್ಮ ಪಾಪಕ್ಕಾಗಿ ಯೆಹೋವನಿಗೆ ಪಾಪಪರಿಹಾರಕ ಬಲಿಯನ್ನ ಅರ್ಪಿಸಿದ್ರಿಂದ ಅವ್ರಿಗೆ ಕ್ಷಮೆ ಸಿಗುತ್ತೆ. 26  ಆಕಸ್ಮಿಕವಾಗಿ ಪಾಪ ಮಾಡಿದ್ರಿಂದ ದೇವರು ಇಸ್ರಾಯೇಲ್ಯರನ್ನೂ ಅವ್ರ ಮಧ್ಯ ವಾಸಿಸ್ತಿರೋ ವಿದೇಶಿಯರನ್ನೂ ಕ್ಷಮಿಸ್ತಾನೆ. 27  ಒಬ್ಬ ವ್ಯಕ್ತಿ ಆಕಸ್ಮಿಕವಾಗಿ ಪಾಪ ಮಾಡಿದ್ರೆ ಒಂದು ವರ್ಷದೊಳಗಿನ ಒಂದು ಹೆಣ್ಣು ಆಡನ್ನ ಪಾಪಪರಿಹಾರಕ ಬಲಿಯಾಗಿ ಕೊಡಬೇಕು.+ 28  ಗೊತ್ತಿಲ್ಲದೆ ಪಾಪ ಮಾಡಿದ ಆ ವ್ಯಕ್ತಿಗಾಗಿ ಪುರೋಹಿತ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನಿಗೆ ಕ್ಷಮೆ ಸಿಗುತ್ತೆ.+ 29  ಇಸ್ರಾಯೇಲ್ಯರಾದ ನೀವಾಗ್ಲಿ ನಿಮ್ಮ ಮಧ್ಯ ವಾಸಿಸ್ತಿರೋ ವಿದೇಶಿಯರಾಗ್ಲಿ ಗೊತ್ತಿಲ್ಲದೆ ಪಾಪ ಮಾಡಿದಾಗ ಇಬ್ರಿಗೂ ಒಂದೇ ನಿಯಮ ಅನ್ವಯ ಆಗುತ್ತೆ.+ 30  ಆದ್ರೆ ಇಸ್ರಾಯೇಲ್ಯರಾದ ನಿಮ್ಮಲ್ಲಿ ಅಥವಾ ನಿಮ್ಮ ಮಧ್ಯ ವಾಸಿಸ್ತಿರೋ ವಿದೇಶಿಯರಲ್ಲಿ ಯಾರಾದ್ರೂ ಬೇಕುಬೇಕಂತಾನೇ ಪಾಪ ಮಾಡಿದ್ರೆ+ ಅವನು ಯೆಹೋವನನ್ನ ಕೆಟ್ಟದಾಗಿ ಬೈದ ಹಾಗೆ. ಅಂಥವನನ್ನ ಸಾಯಿಸಬೇಕು. 31  ಯೆಹೋವನ ಮಾತನ್ನ ಅಸಡ್ಡೆ ಮಾಡಿ ಆತನ ಆಜ್ಞೆಯನ್ನ ಪಾಲಿಸದೇ ಇದ್ದದ್ರಿಂದ ಅವನನ್ನ ಸಾಯಿಸ್ಲೇಬೇಕು.+ ಅವನು ಮಾಡಿದ ಪಾಪಕ್ಕೆ ಶಿಕ್ಷೆ ಅನುಭವಿಸ್ಲೇಬೇಕು.’”+ 32  ಇಸ್ರಾಯೇಲ್ಯರು ಕಾಡಲ್ಲಿದ್ದಾಗ ಸಬ್ಬತ್‌ ದಿನದಲ್ಲಿ ಒಬ್ಬ ಕಟ್ಟಿಗೆ ಕೂಡಿಸ್ತಿದ್ದ.+ 33  ಇದನ್ನ ನೋಡಿದವರು ಅವನನ್ನ ಮೋಶೆ, ಆರೋನ ಮತ್ತು ಎಲ್ಲ ಜನ್ರ ಹತ್ರ ಕರ್ಕೊಂಡು ಬಂದ್ರು. 34  ಇಂಥವನಿಗೆ ಏನು ಮಾಡಬೇಕಂತ ನಿಯಮದಲ್ಲಿ ವಿವರವಾಗಿ ತಿಳಿಸದೇ ಇದ್ದದ್ರಿಂದ ಅವನನ್ನ ಬಂಧಿಸಿಟ್ರು.+ 35  ಆಮೇಲೆ ಯೆಹೋವ ಮೋಶೆಗೆ “ಅವನನ್ನ ಸಾಯಿಸ್ಲೇಬೇಕು.+ ಪಾಳೆಯದ ಹೊರಗೆ ಕರ್ಕೊಂಡು ಹೋಗಿ ಎಲ್ಲ ಇಸ್ರಾಯೇಲ್ಯರು ಕಲ್ಲು ಹೊಡೆದು ಕೊಲ್ಲಬೇಕು”+ ಅಂದನು. 36  ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಇಸ್ರಾಯೇಲ್ಯರು ಅವನನ್ನ ಪಾಳೆಯದ ಹೊರಗೆ ಕರ್ಕೊಂಡು ಹೋಗಿ ಕಲ್ಲು ಹೊಡೆದು ಕೊಂದ್ರು. 37  ಯೆಹೋವ ಮೋಶೆಗೆ ಮತ್ತೂ ಹೇಳೋದು ಏನಂದ್ರೆ 38  “ಇಸ್ರಾಯೇಲ್ಯರು ತಮ್ಮ ಅಂಗಿಯ ಕೆಳಭಾಗದ ಅಂಚಿನ ಸುತ್ತ ನೂಲನ್ನ ಎಳೆಎಳೆಯಾಗಿ ಬಿಟ್ಟಿರಬೇಕು. ಆ ಅಂಚಿನ ಮೇಲ್ಭಾಗದಲ್ಲಿ ಸುತ್ತ ಒಂದು ನೀಲಿ ದಾರ ನೇಯ್ದಿರಬೇಕು.+ ಇದನ್ನ ಅವರು ಎಲ್ಲ ಪೀಳಿಗೆಯವರು ಪಾಲಿಸಬೇಕು ಅಂತ ಹೇಳು. 39  ‘ನೂಲನ್ನ ಎಳೆಎಳೆಯಾಗಿ ಬಿಟ್ಟಿರೋ ಅಂಚನ್ನ ನೀವು ನೋಡುವಾಗೆಲ್ಲ ಯೆಹೋವ ಕೊಟ್ಟಿರೋ ಎಲ್ಲ ಆಜ್ಞೆಗಳನ್ನ ನೆನಪಿಸ್ಕೊಂಡು ಅವುಗಳನ್ನ ಪಾಲಿಸಬೇಕಂತಾನೇ ಈ ನಿಯಮ ಕೊಟ್ಟಿದ್ದೀನಿ.+ ನಿಮ್ಮ ಮನಸ್ಸಿಗೆ ತೋಚಿದ್ದನ್ನ ಕಣ್ಣಿಗೆ ಸರಿ ಕಾಣೋದನ್ನ ಮಾಡಬಾರದು. ಹಾಗೆ ಮಾಡಿದ್ರೆ ನನಗೆ ದ್ರೋಹ ಮಾಡಿದ ಹಾಗೆ.*+ 40  ಈ ನಿಯಮದಿಂದಾಗಿ ನಿಮಗೆ ನನ್ನ ಎಲ್ಲ ಆಜ್ಞೆಗಳನ್ನ ನೆನಪಲ್ಲಿಡೋಕೆ ಆಗುತ್ತೆ. ಅವುಗಳನ್ನ ಪಾಲಿಸಿದ್ರೆ ನಿಮ್ಮ ದೇವರ ದೃಷ್ಟಿಯಲ್ಲಿ ಪವಿತ್ರರಾಗಿ ಇರ್ತಿರ.+ 41  ನಾನೇ ನಿಮ್ಮ ದೇವರು ಅಂತ ನಿಮಗೆ ಗೊತ್ತಾಗೋಕೆ ನಿಮ್ಮನ್ನ ಈಜಿಪ್ಟಿಂದ ಕರ್ಕೊಂಡು ಬಂದಿರೋ ನಿಮ್ಮ ದೇವರಾದ ಯೆಹೋವ ನಾನೇ.+ ನಾನು ನಿಮ್ಮ ದೇವರಾದ ಯೆಹೋವ.’”+

ಪಾದಟಿಪ್ಪಣಿ

ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಒಂದು ಹಿನ್‌ ಅಂದ್ರೆ 3.67 ಲೀ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಒಂದು ಹಿನ್‌ನ ನಾಲ್ಕನೇ ಒಂದು ಭಾಗ.” ಪರಿಶಿಷ್ಟ ಬಿ14 ನೋಡಿ.
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ಸಮಾಧಾನ.” ಅಕ್ಷ. “ನೆಮ್ಮದಿ.”
ಅಥವಾ “ವೇಶ್ಯೆ ತರ ನಡ್ಕೊಂಡ ಹಾಗೆ.”