ಇಬ್ರಿಯರಿಗೆ ಬರೆದ ಪತ್ರ 5:1-14
5 ಪ್ರತಿಯೊಬ್ಬ ಮಹಾ ಪುರೋಹಿತನನ್ನ ಮನುಷ್ಯರಲ್ಲಿ ಆರಿಸಲಾಗುತ್ತೆ ಮತ್ತು ಮನುಷ್ಯರಿಗೋಸ್ಕರ ದೇವರ ಸೇವೆ ಮಾಡೋಕೆ ನೇಮಿಸಲಾಗುತ್ತೆ.+ ಅವನು ಉಡುಗೊರೆಗಳನ್ನ, ಪಾಪಗಳಿಗಾಗಿ ಬಲಿಗಳನ್ನ ಕೊಡ್ತಾನೆ.+
2 ತನಗೂ ಬಲಹೀನತೆಗಳು ಇವೆ ಅಂತ ಅವನಿಗೆ ಗೊತ್ತಿರೋದ್ರಿಂದ ಗೊತ್ತಿಲ್ದೆ ಪಾಪ ಮಾಡಿದವನಿಗೆ* ಅವನು ಕರುಣೆ ತೋರಿಸೋಕೆ* ಆಗುತ್ತೆ.
3 ಅವನಿಗೆ ಬಲಹೀನತೆಗಳು ಇರೋದ್ರಿಂದ ಅವನು ಜನ್ರ ಪಾಪಗಳಿಗಾಗಿ ಬಲಿಗಳನ್ನ ಕೊಡೋ ಹಾಗೆ ತನ್ನ ಪಾಪಗಳಿಗೂ ಬಲಿಗಳನ್ನ ಕೊಡಬೇಕು.+
4 ಒಬ್ಬನು ತಾನೇ ಹೋಗಿ ಮಹಾ ಪುರೋಹಿತ ಆಗೋಕ್ಕಾಗಲ್ಲ. ಆ ಸ್ಥಾನಕ್ಕೆ ಒಬ್ಬನನ್ನ ದೇವರು ಮಾತ್ರ ನೇಮಿಸಿರ್ತಾನೆ. ಆರೋನನನ್ನ ನೇಮಿಸಿದ್ದು ದೇವರೇ ಅಲ್ವಾ?+
5 ಕ್ರಿಸ್ತನ ವಿಷ್ಯದಲ್ಲೂ ಹಾಗೆ. ಯೇಸು ತನ್ನನ್ನ ತಾನೇ ಮಹಾ ಪುರೋಹಿತನಾಗಿ ನೇಮಿಸ್ಕೊಂಡು ಮಹಿಮೆ ತಗೊಳ್ಳಲಿಲ್ಲ.+ ಆತನಿಗೆ ದೇವರೇ ಆ ಮಹಿಮೆ ಕೊಟ್ಟನು. ಆತನಿಗೆ ದೇವರು “ನೀನು ನನ್ನ ಮಗ. ಇವತ್ತಿಂದ ನಾನು ನಿನ್ನ ಅಪ್ಪ” ಅಂತ ಹೇಳಿದನು.+
6 ಇನ್ನೊಂದು ವಚನದಲ್ಲಿ “ನೀನು ಮೆಲ್ಕಿಜೆದೇಕನ ತರ ಶಾಶ್ವತವಾಗಿ ಪುರೋಹಿತನಾಗಿ ಇರ್ತಿಯ” ಅಂತನೂ ದೇವರು ಹೇಳಿದ್ದಾನೆ.+
7 ಕ್ರಿಸ್ತ ಭೂಮಿ ಮೇಲೆ ಜೀವಿಸ್ತಿದ್ದಾಗ ತನ್ನನ್ನ ಮರಣದಿಂದ ಕಾಪಾಡೋಕೆ ಆಗೋ ದೇವರಿಗೆ ಗಟ್ಟಿಯಾಗಿ ಕೂಗ್ತಾ ಅತ್ತು ಅತ್ತು+ ಅಂಗಲಾಚಿ ಬೇಡಿದ, ವಿನಂತಿಗಳನ್ನ ಮಾಡಿದ. ಆತನು ದೇವರಿಗೆ ಭಯಪಟ್ಟಿದ್ರಿಂದ ಆತನ ಪ್ರಾರ್ಥನೆಗಳಿಗೆ ದೇವರು ಉತ್ತರ ಕೊಟ್ಟನು.
8 ಆತನು ದೇವರ ಮಗನಾಗಿದ್ರೂ ತಾನು ಪಟ್ಟ ಕಷ್ಟಗಳನ್ನ ಸಹಿಸ್ಕೊಂಡು ಆಜ್ಞೆ ಪಾಲಿಸೋದನ್ನ ಕಲಿತ್ಕೊಂಡ.+
9 ಹೀಗೆ ಆತನು ಪೂರ್ತಿ ಯೋಗ್ಯತೆ ಪಡ್ಕೊಂಡ* ಮೇಲೆ+ ಆತನ ಮಾತನ್ನ ಕೇಳೋ ಎಲ್ರನ್ನ ಶಾಶ್ವತವಾಗಿ ರಕ್ಷಿಸೋ ಜವಾಬ್ದಾರಿ ಆತನಿಗೆ ಸಿಕ್ತು.+
10 ಯಾಕಂದ್ರೆ ಆತನನ್ನ ಮೆಲ್ಕಿಜೆದೇಕನ ತರ ಮಹಾ ಪುರೋಹಿತನಾಗಿ ನೇಮಿಸಿದ್ದು ದೇವರೇ.+
11 ಆತನ ಬಗ್ಗೆ ಹೇಳೋಕೆ ತುಂಬ ವಿಷ್ಯ ಇದೆ. ಆದ್ರೆ ಅದನ್ನ ಅರ್ಥ ಮಾಡ್ಕೊಳ್ಳೋಕೆ ನೀವು ಪ್ರಯತ್ನನೇ ಹಾಕಲ್ಲ. ಅದಕ್ಕೆ ಅದನ್ನೆಲ್ಲ ನಿಮಗೆ ವಿವರಿಸೋದು ಕಷ್ಟ.
12 ಇಷ್ಟೊತ್ತಿಗೆ ನೀವು ಇನ್ನೊಬ್ರಿಗೆ ಕಲಿಸಬೇಕಿತ್ತು. ಆದ್ರೆ ಪವಿತ್ರ ಗ್ರಂಥದಿಂದ ನೀವು ಮೊದಮೊದ್ಲು ಕಲಿತ ವಿಷ್ಯಗಳನ್ನೇ ಬೇರೆಯವರು ನಿಮಗೆ ಈಗ ಮತ್ತೆ ಕಲಿಸಬೇಕಾಗಿದೆ.+ ನೀವು ಗಟ್ಟಿ ಆಹಾರ ತಿನ್ನುವವ್ರ ತರ ಇಲ್ಲ. ಮತ್ತೆ ಹಾಲು ಕುಡಿಯುವವ್ರ ತರ ಆಗಿದ್ದೀರ.
13 ಇನ್ನೂ ಹಾಲನ್ನೇ ಕುಡಿತಾ ಇರುವವರು ಚಿಕ್ಕ ಮಕ್ಕಳು. ಹಾಗಾಗಿ ಅವ್ರಿಗೆ ದೇವರ ನೀತಿಯ ಮಾತುಗಳ ಬಗ್ಗೆ ಗೊತ್ತಿಲ್ಲ.+
14 ಆದ್ರೆ ಗಟ್ಟಿ ಆಹಾರ ಪ್ರೌಢರಿಗೆ. ಅವರು ಒಂದು ವಿಷ್ಯದ ಬಗ್ಗೆ ತುಂಬ ಯೋಚಿಸ್ತಾರೆ. ಹೀಗೆ ಸರಿ ಯಾವುದು, ತಪ್ಪು ಯಾವುದು ಅನ್ನೋ ವ್ಯತ್ಯಾಸ ತಿಳ್ಕೊಳ್ಳೋಕೆ ಅವ್ರಿಗೆ ಅವ್ರೇ ತರಬೇತಿ ಕೊಡ್ತಾರೆ.
ಪಾದಟಿಪ್ಪಣಿ
^ ಅಥವಾ “ಮನಸ್ಸಿಗೆ ಬಂದ ಹಾಗೆ ನಡ್ಕೊಳ್ಳುವವನಿಗೆ.”
^ ಅಥವಾ “ಸೌಮ್ಯವಾಗಿ ನಡ್ಕೊಳ್ಳೋಕೆ.”
^ ಅಕ್ಷ. “ಪರಿಪೂರ್ಣಗೊಳಿಸಿದ.”