ಧರ್ಮೋಪದೇಶಕಾಂಡ 6:1-25

  • ಪೂರ್ಣ ಹೃದಯದಿಂದ ಯೆಹೋವನನ್ನ ಪ್ರೀತಿಸಿ (1-9)

    • “ಇಸ್ರಾಯೇಲ್ಯರೇ ಕೇಳಿ” (4)

    • ಹೆತ್ತವರು ಮಕ್ಕಳಿಗೆ ಕಲಿಸಬೇಕು (6, 7)

  • ಯೆಹೋವನನ್ನ ಮರಿಬೇಡಿ (10-15)

  • ಯೆಹೋವನನ್ನ ಪರೀಕ್ಷಿಸಬೇಡಿ (16-19)

  • ಮುಂದಿನ ಪೀಳಿಗೆಗೆ ಹೇಳಿ (20-25)

6  ನಾನು ಮುಂದೆ ಹೇಳೋ ಆಜ್ಞೆ, ನಿಯಮ, ತೀರ್ಪುಗಳನ್ನ ನಿಮಗೆ ಕಲಿಸಬೇಕಂತ ನಿಮ್ಮ ದೇವರಾದ ಯೆಹೋವ ನನಗೆ ಹೇಳಿದ್ದಾನೆ. ನೀವು ಯೋರ್ದನ್‌ ದಾಟಿ ವಶ ಮಾಡ್ಕೊಳ್ಳೋ ದೇಶದಲ್ಲಿ ಇದನ್ನೆಲ್ಲ ಪಾಲಿಸಬೇಕು.  ನೀವು, ನಿಮ್ಮ ಮಕ್ಕಳು, ಮೊಮ್ಮಕ್ಕಳು ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು.+ ನೀವು ಜೀವನಪೂರ್ತಿ ಆತನ ನಿಯಮಗಳನ್ನ, ಆಜ್ಞೆಗಳನ್ನ ಪಾಲಿಸಬೇಕು. ಆಗ ಜಾಸ್ತಿ ವರ್ಷ ಬದುಕ್ತೀರ.+  ಇಸ್ರಾಯೇಲ್ಯರೇ, ಗಮನಕೊಟ್ಟು ಕೇಳಿ, ತಪ್ಪದೆ ಪಾಲಿಸಿ. ಆಗ ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಮಾತುಕೊಟ್ಟ ಹಾಗೇ ಹಾಲೂ ಜೇನೂ ಹರಿಯೋ ದೇಶದಲ್ಲಿ ಸುಖಸಂತೋಷ ಇರುತ್ತೆ, ನಿಮ್ಮ ಸಂಖ್ಯೆ ಜಾಸ್ತಿ ಆಗುತ್ತೆ.  ಇಸ್ರಾಯೇಲ್ಯರೇ ಕೇಳಿ, ನಮ್ಮ ದೇವರಾದ ಯೆಹೋವ ಒಬ್ಬನೇ ಯೆಹೋವ.+  ನಿಮ್ಮ ದೇವರಾದ ಯೆಹೋವನನ್ನ ನೀವು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ,*+ ಪೂರ್ಣ ಶಕ್ತಿಯಿಂದ* ಪ್ರೀತಿಸಬೇಕು.+  ಇವತ್ತು ನಾನು ಹೇಳೋ ಈ ಮಾತುಗಳು ನಿಮ್ಮ ಹೃದಯದಲ್ಲಿ ಇರಬೇಕು.  ಇದನ್ನ ನಿಮ್ಮ ಮಕ್ಕಳ ಹೃದಯದಲ್ಲಿ ಅಚ್ಚೊತ್ತಬೇಕು.*+ ಮನೇಲಿ ಕೂತಿರುವಾಗ ದಾರೀಲಿ ನಡಿವಾಗ ಮಲಗುವಾಗ ಏಳುವಾಗ ನೀವು ಇದ್ರ ಬಗ್ಗೆ ಅವ್ರ ಹತ್ರ ಮಾತಾಡಬೇಕು.+  ಇದನ್ನೆಲ್ಲ ನೆನಪಿನ ಪಟ್ಟಿ ತರ ನಿಮ್ಮ ಕೈಗೆ ಕಟ್ಕೊಬೇಕು, ಹಣೆಪಟ್ಟಿ ತರ ಹಣೆಗೆ ಕಟ್ಕೊಬೇಕು.+  ನಿಮ್ಮ ಮನೆ ಬಾಗಿಲಿನ ಚೌಕಟ್ಟಿನ ಮೇಲೆ, ಬಾಗಿಲಿನ ಮೇಲೆ ಬರೀಬೇಕು. 10  ನಿಮ್ಮ ದೇವರಾದ ಯೆಹೋವ ನಿಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ, ಯಾಕೋಬನಿಗೆ ಆಣೆ ಮಾಡಿ ಕೊಡ್ತೀನಿ ಅಂತ ಹೇಳಿದ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಹೋಗ್ತಾನೆ.+ ನೀವು ಕಟ್ಟದಿದ್ದ ಅತ್ಯುತ್ತಮವಾದ ದೊಡ್ಡದೊಡ್ಡ ಪಟ್ಟಣಗಳನ್ನ ನಿಮಗೆ ಕೊಡ್ತಾನೆ.+ 11  ನೀವು ದುಡಿದು ಸಂಪಾದಿಸದೆ ಇದ್ದ ಎಲ್ಲ ತರದ ಒಳ್ಳೇ ವಸ್ತುಗಳು ತುಂಬಿರೋ ಮನೆ, ನೀವು ಅಗೆಯದಿದ್ದ ನೀರು ಗುಂಡಿ, ನೆಟ್ಟು ಬೆಳೆಸದಿದ್ದ ದಾಕ್ಷಿತೋಟ ಆಲಿವ್‌ ಮರಗಳನ್ನ ಕೊಡ್ತಾನೆ. ಇವನ್ನೆಲ್ಲ ನೀವು ಅನುಭವಿಸಿ ತೃಪ್ತಿ ಆದಾಗ+ 12  ನಿಮ್ಮನ್ನ ಈಜಿಪ್ಟಿನ ಗುಲಾಮಗಿರಿಯಿಂದ ಬಿಡಿಸ್ಕೊಂಡು ಬಂದ ಯೆಹೋವನನ್ನ ಮರಿಬೇಡಿ.+ ಈ ವಿಷ್ಯವನ್ನ ನೆನಪಿಟ್ಕೊಳ್ಳಿ. 13  ನಿಮ್ಮ ದೇವರಾದ ಯೆಹೋವನಿಗೆ ನೀವು ಭಯಪಡಬೇಕು.+ ಆತನ ಸೇವೆಯನ್ನೇ ಮಾಡಬೇಕು.+ ಆತನ ಹೆಸ್ರಲ್ಲೇ ಆಣೆ ಮಾಡಬೇಕು.+ 14  ನೀವು ಬೇರೆ ದೇವರುಗಳ ಅಂದ್ರೆ ನಿಮ್ಮ ಸುತ್ತಮುತ್ತ ಇರೋ ಜನಾಂಗಗಳು ಆರಾಧಿಸೋ ಯಾವ ದೇವರ ಹಿಂದೆನೂ ಹೋಗಬಾರದು.+ 15  ಯಾಕಂದ್ರೆ ನಿಮ್ಮ ಮಧ್ಯ ಇರೋ ದೇವರಾದ ಯೆಹೋವನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ* ದೇವರಾಗಿದ್ದಾನೆ.+ ನೀವು ಹಾಗೆ ಮಾಡದಿದ್ರೆ ನಿಮ್ಮ ದೇವರಾದ ಯೆಹೋವನ ಕೋಪ ನಿಮ್ಮ ಮೇಲೆ ಹೊತ್ತಿ ಉರಿಯುತ್ತೆ.+ ಆತನು ನಿಮ್ಮನ್ನ ಭೂಮಿ ಮೇಲೆ ಉಳಿಯದ ಹಾಗೆ ನಾಶ ಮಾಡ್ತಾನೆ.+ 16  ನಿಮ್ಮ ದೇವರಾದ ಯೆಹೋವನನ್ನ ಪರೀಕ್ಷಿಸಬಾರದು.+ ಮಸ್ಸದಲ್ಲಿ ಆತನನ್ನ ಪರೀಕ್ಷಿಸಿದ ಹಾಗೆ ಇನ್ನು ಯಾವತ್ತೂ ಆತನನ್ನ ಪರೀಕ್ಷಿಸಬಾರದು.+ 17  ನಿಮ್ಮ ದೇವರಾದ ಯೆಹೋವ ಕೊಟ್ಟಿರೋ ಆಜ್ಞೆಗಳನ್ನ ನಿಯಮಗಳನ್ನ ಮತ್ತೆಮತ್ತೆ ನೆನಪು ಹುಟ್ಟಿಸಿರೋ ನಿರ್ದೇಶನಗಳನ್ನ ಶ್ರದ್ಧೆಯಿಂದ ಪಾಲಿಸಬೇಕು. 18  ಯೆಹೋವನ ದೃಷ್ಟಿಯಲ್ಲಿ ಸರಿಯಾದ ವಿಷ್ಯವನ್ನ, ಒಳ್ಳೇ ವಿಷ್ಯವನ್ನ ಮಾಡಬೇಕು. ಇದ್ರಿಂದ ನೀವು ಸಂತೋಷ ಸಂತೃಪ್ತಿಯಿಂದ ಇರ್ತಿರ. ಯೆಹೋವ ನಿಮ್ಮ ಪೂರ್ವಜರಿಗೆ ಆಣೆ ಮಾಡಿದ ಒಳ್ಳೇ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಳ್ತೀರ.+ 19  ಯೆಹೋವ ಮಾತುಕೊಟ್ಟ ಹಾಗೇ ಅಲ್ಲಿಂದ ನಿಮ್ಮ ಶತ್ರುಗಳನ್ನೆಲ್ಲ ಓಡಿಸಿಬಿಡ್ತೀರ.+ 20  ಮುಂದೆ ಯಾವತ್ತಾದ್ರೂ ನಿಮ್ಮ ಮಕ್ಕಳು ‘ನಮ್ಮ ದೇವರಾದ ಯೆಹೋವ ಈ ನಿಯಮಗಳನ್ನ ತೀರ್ಪುಗಳನ್ನ ನೆನಪು ಹುಟ್ಟಿಸೋ ನಿರ್ದೇಶನಗಳನ್ನ ಯಾಕೆ ನಿಮಗೆ ಕೊಟ್ಟಿದ್ದಾನೆ?’ ಅಂತ ಕೇಳಿದ್ರೆ 21  ‘ನಾವು ಈಜಿಪ್ಟಲ್ಲಿ ಫರೋಹನಿಗೆ ಗುಲಾಮರಾಗಿದ್ವಿ. ಆದ್ರೆ ಯೆಹೋವ ತನ್ನ ಮಹಾ ಶಕ್ತಿ ತೋರಿಸಿ* ನಮ್ಮನ್ನ ಅಲ್ಲಿಂದ ಕರ್ಕೊಂಡು ಬಂದನು. 22  ಯೆಹೋವ ನಮ್ಮ ಕಣ್ಮುಂದೆನೇ ಈಜಿಪ್ಟಲ್ಲಿ ದೊಡ್ಡದೊಡ್ಡ ಸೂಚಕ ಕೆಲಸಗಳನ್ನ, ಅದ್ಭುತಗಳನ್ನ ಮಾಡ್ತಾ ಇದ್ದನು.+ ಹೀಗೆ ಇಡೀ ಈಜಿಪ್ಟಿಗೆ ಫರೋಹನಿಗೆ ಅವನ ಮನೆಯವರಿಗೆ ಶಿಕ್ಷೆ ಕೊಟ್ಟನು.+ 23  ನಮ್ಮ ಪೂರ್ವಜರಿಗೆ ಆಣೆ ಮಾಡಿದ ಈ ದೇಶಕ್ಕೆ ನಮ್ಮನ್ನ ಸೇರಿಸೋಕೆ ಆತನು ನಮ್ಮನ್ನ ಈಜಿಪ್ಟ್‌ ದೇಶದಿಂದ ಕರ್ಕೊಂಡು ಬಂದನು.+ 24  ಆಮೇಲೆ ನಾವು ಈ ನಿಯಮಗಳ ಪ್ರಕಾರ ನಡಿಬೇಕಂತ, ನಮ್ಮ ದೇವರಾದ ಯೆಹೋವನಿಗೆ ಭಯಪಡಬೇಕಂತ ಯೆಹೋವ ಆಜ್ಞೆ ಕೊಟ್ಟನು. ನಮಗೆ ಯಾವಾಗ್ಲೂ ಒಳ್ಳೇದಾಗಬೇಕು,+ ಬಾಳಿ ಬದುಕಬೇಕು+ ಅನ್ನೋ ಕಾರಣಕ್ಕಾಗಿ ಆ ಆಜ್ಞೆ ಕೊಟ್ಟನು. ಅದಕ್ಕೇ ಇವತ್ತು ಜೀವಂತವಾಗಿ ಇದ್ದೀವಿ. 25  ನಮ್ಮ ದೇವರಾದ ಯೆಹೋವ ಆಜ್ಞೆ ಕೊಟ್ಟ ಹಾಗೇ ನಾವು ಆತನ ಮಾತು ಕೇಳಿ ಈ ಆಜ್ಞೆಗಳನ್ನೆಲ್ಲ ತಪ್ಪದೆ ಪಾಲಿಸಿದ್ರೆ ಆತನ ದೃಷ್ಟಿಯಲ್ಲಿ ನೀತಿವಂತರಾಗಿ ಇರ್ತಿವಿ’ + ಅಂತ ಹೇಳಬೇಕು.

ಪಾದಟಿಪ್ಪಣಿ

ಅಥವಾ “ನಿನ್ನ ಹತ್ರ ಇರೋದ್ರಿಂದ.”
ಅಥವಾ “ಮತ್ತೆಮತ್ತೆ ಹೇಳಬೇಕು; ಮನಸ್ಸಿಗೆ ನಾಟಿಸಬೇಕು.”
ಅಥವಾ “ಅನನ್ಯ ಭಕ್ತಿ ಕೇಳೋ ಹಕ್ಕಿರೋ.”
ಅಕ್ಷ. “ತನ್ನ ಬಲಿಷ್ಠ ಕೈಯಿಂದ.”