ಪ್ರಸಂಗಿ 2:1-26
2 ಆಮೇಲೆ ನಾನು ಮನಸ್ಸಲ್ಲೇ “ಮಜಾ ಮಾಡೋಣ ಅದ್ರಿಂದ ಏನು ಪ್ರಯೋಜನ ಸಿಗುತ್ತೆ ನೋಡೋಣ” ಅಂದ್ಕೊಂಡೆ. ಆದ್ರೆ ಅದೂ ವ್ಯರ್ಥ.
2 “ನಗು ಹುಚ್ಚುತನ!” ಅಂತಾನೂ“ಮೋಜು ಮಾಡೋದ್ರಿಂದ ಏನೂ ಪ್ರಯೋಜನ ಇಲ್ಲ” ಅಂತಾನೂ ನಾನು ಹೇಳಿದೆ.
3 ದ್ರಾಕ್ಷಾಮದ್ಯವನ್ನ ತೃಪ್ತಿಯಾಗುವಷ್ಟು ಕುಡಿದು ನೋಡೋಣ+ ಅಂತ ನಾನು ನಿರ್ಧಾರ ಮಾಡ್ದೆ. ಎಷ್ಟು ಕುಡಿದ್ರೂ ನಾನು ಬುದ್ಧಿ ಕಳ್ಕೊಳ್ಳಲಿಲ್ಲ. ಭೂಮಿ ಮೇಲಿನ ನಾಲ್ಕು ದಿನದ ಬದುಕಲ್ಲಿ ಮನುಷ್ಯರು ಏನು ಮಾಡಿದ್ರೆ ಒಳ್ಳೇದು ಅಂತ ಕಂಡುಹಿಡಿಯೋಕೆ ನಾನು ಮೂರ್ಖ ವಿಷ್ಯಗಳನ್ನೂ ಮಾಡಿ ನೋಡಿದೆ.
4 ದೊಡ್ಡದೊಡ್ಡ ಕೆಲಸಗಳನ್ನ ಕೈಗೆತ್ತಿಕೊಂಡೆ.+ ನನಗೋಸ್ಕರ ಮನೆಗಳನ್ನ ಕಟ್ಟಿದೆ,+ ದ್ರಾಕ್ಷಿ ತೋಟಗಳನ್ನ ಮಾಡಿದೆ.+
5 ನನಗೋಸ್ಕರ ತೋಟಗಳನ್ನ, ಹೂವಿನ ತೋಟಗಳನ್ನ ಮಾಡಿದೆ. ಅಲ್ಲಿ ಎಲ್ಲ ರೀತಿಯ ಹಣ್ಣಿನ ಮರಗಳನ್ನ ನೆಟ್ಟೆ.
6 ಸೊಂಪಾಗಿ ಬೆಳಿತಿರೋ ಮರಗಳ ತೋಪಿಗಾಗಿ* ನೀರಿನ ಕೊಳಗಳನ್ನ ಮಾಡಿದೆ.
7 ನನಗೆ ಕೈಗೊಬ್ರು ಕಾಲಿಗೊಬ್ರು ಆಳುಗಳಿದ್ರು.+ ನನ್ನ ಮನೆಯಲ್ಲೇ ಹುಟ್ಟಿ ಬೆಳೆದ ಸೇವಕರೂ ನನಗಿದ್ರು. ಲೆಕ್ಕ ಇಲ್ಲದಷ್ಟು ದನ, ಆಡು, ಕುರಿಗಳನ್ನ ಸಂಪಾದಿಸಿದೆ.+ ಯೆರೂಸಲೇಮಲ್ಲಿ ನನಗಿಂತ ಮುಂಚೆ ಆಳ್ತಿದ್ದ ಯಾರ ಹತ್ರನೂ ಅಷ್ಟು ಜಾನುವಾರುಗಳು ಇರಲಿಲ್ಲ.
8 ನಾನು ನನಗೋಸ್ಕರ ಚಿನ್ನಬೆಳ್ಳಿಯನ್ನ,+ ರಾಜರ ಮತ್ತು ಪ್ರಾಂತಗಳ ಸಂಪತ್ತನ್ನ ಕೂಡಿಸಿಟ್ಟೆ.+ ನನಗೋಸ್ಕರ ಗಾಯಕ ಗಾಯಕಿಯರನ್ನ ನೇಮಿಸಿದೆ. ಗಂಡಸರಿಗೆ ತುಂಬಾ ಸಂತೋಷ ಕೊಡೋ ಸ್ತ್ರೀಯ, ಅಷ್ಟೇ ಯಾಕೆ ತುಂಬ ಸ್ತ್ರೀಯರ* ಸಹವಾಸ ಮಾಡ್ದೆ.
9 ಯೆರೂಸಲೇಮಲ್ಲಿ ನನಗಿಂತ ಮುಂಚೆ ಇದ್ದ ಎಲ್ರಿಗಿಂತ ನಾನು ದೊಡ್ಡ ವ್ಯಕ್ತಿಯಾದೆ.+ ಆಗಲೂ ನಾನು ವಿವೇಕದಿಂದ ನಡ್ಕೊಂಡೆ.
10 ನನ್ನ ಕಣ್ಣು ಆಸೆಪಟ್ಟಿದ್ದನ್ನೆಲ್ಲ ಪಡೆದೆ.+ ಎಲ್ಲ ರೀತಿ ಸುಖಸಂತೋಷದಲ್ಲಿ ತೇಲಾಡಿದೆ. ನನ್ನೆಲ್ಲಾ ಪರಿಶ್ರಮದಲ್ಲಿ ನಾನು ಸಂತೋಷ ಪಡ್ದೆ. ಇದು ನನ್ನೆಲ್ಲ ಶ್ರಮಕ್ಕೆ ಸಿಕ್ಕಿದ ಪ್ರತಿಫಲ.+
11 ಆದ್ರೆ ನಾನು ಮಾಡಿದ ಎಲ್ಲ ಕೆಲಸಗಳ ಬಗ್ಗೆ, ತುಂಬ ಕಷ್ಟಪಟ್ಟು ಸಾಧಿಸಿದ+ ವಿಷ್ಯಗಳ ಬಗ್ಗೆ ಯೋಚಿಸಿದಾಗ ಅದೆಲ್ಲ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗೆ ಅಂತ ಅರ್ಥ ಆಯ್ತು.+ ಈ ಭೂಮಿಯಲ್ಲಿ* ಯಾವುದ್ರಿಂದನೂ ಏನೂ ಪ್ರಯೋಜನ ಇಲ್ಲ ಅಂತ ಅರ್ಥ ಮಾಡ್ಕೊಂಡೆ.+
12 ಆಮೇಲೆ ನಾನು ವಿವೇಕಕ್ಕೆ, ಹುಚ್ಚುತನಕ್ಕೆ ಮತ್ತು ಮೂರ್ಖತನಕ್ಕೆ ಗಮನಕೊಡೋಕೆ ಶುರುಮಾಡಿದೆ.+ (ರಾಜನ ನಂತ್ರ ಬರುವವನಿಗೆ ಬೇರೇನು ಮಾಡಕ್ಕಾಗುತ್ತೆ? ಈಗಾಗ್ಲೇ ಮಾಡಿರೋದನ್ನ ಅವನು ಮಾಡಬೇಕಷ್ಟೆ.)
13 ಕತ್ತಲೆಗಿಂತ ಬೆಳಕು ಹೇಗೆ ಪ್ರಯೋಜನ ತರುತ್ತೋ ಹಾಗೇ ಮೂರ್ಖತನಕ್ಕಿಂತ ವಿವೇಕ ಪ್ರಯೋಜನ ತರುತ್ತೆ ಅಂತ ನನಗೆ ಗೊತ್ತಾಯ್ತು.+
14 ವಿವೇಕಿಗೆ ತಾನು ನಡಿತಿರೋ ಮಾರ್ಗ ಚೆನ್ನಾಗಿ ಕಾಣುತ್ತೆ.*+ ಆದ್ರೆ ಅವಿವೇಕಿ ಕತ್ತಲಲ್ಲಿ ಅಲೆದಾಡ್ತಾನೆ.+ ಅಷ್ಟೇ ಅಲ್ಲ ಕೊನೇಲಿ ಇಬ್ರಿಗೂ ಒಂದೇ ಗತಿ ಬರುತ್ತೆ ಅಂತಾನೂ ಅರ್ಥ ಮಾಡ್ಕೊಂಡಿದ್ದೀನಿ.+
15 ಆಮೇಲೆ ಮನಸ್ಸಲ್ಲೇ “ಕೊನೆಗೆ ಅವಿವೇಕಿಗೆ ಬರೋ ಗತಿ ನನಗೂ ಬರುತ್ತೆ.+ ಅಂದ್ಮೇಲೆ ಇಷ್ಟೊಂದು ವಿವೇಕಿಯಾಗಿ ನನಗೇನು ಲಾಭ?” ಅಂದ್ಕೊಂಡೆ. ಹಾಗಾಗಿ “ಇದೂ ವ್ಯರ್ಥ” ಅಂತ ನೆನೆಸಿದೆ.
16 ವಿವೇಕಿಯಾಗಲಿ ಅವಿವೇಕಿಯಾಗಲಿ ಜನ್ರ ನೆನಪಲ್ಲಿ ಶಾಶ್ವತವಾಗಿ ಉಳಿಯಲ್ಲ.+ ದಿನ ಹೋದ ಹಾಗೆ ಜನ ಎಲ್ರನ್ನೂ ಮರೆತುಹೋಗ್ತಾರೆ. ಅವಿವೇಕಿ ಸಾಯೋ ತರ ವಿವೇಕಿನೂ ಸಾಯ್ತಾನೆ.+
17 ಈ ಭೂಮಿಯಲ್ಲಿ ನಡಿತಿರೋ ವಿಷ್ಯಗಳನ್ನೆಲ್ಲ ನೋಡಿ ನನಗೆ ತುಂಬ ದುಃಖ ಆಯ್ತು, ಅವೆಲ್ಲ ವ್ಯರ್ಥ.+ ಗಾಳಿ ಹಿಡಿಯೋಕೆ ಓಡೋ ಹಾಗೆ.+ ಹಾಗಾಗಿ ಇಂಥ ಜೀವನಾನೇ ಸಾಕಾಗಿ ಹೋಯ್ತು.+
18 ನಾನು ಕಷ್ಟಪಟ್ಟು ಈ ಭೂಮಿಯಲ್ಲಿ ಏನೆಲ್ಲ ಮಾಡಿದ್ನೋ ಅದನ್ನೆಲ್ಲ ಹಗೆಮಾಡಿದೆ.+ ಯಾಕಂದ್ರೆ ನಾನು ಸತ್ತ ಮೇಲೆ ಅದೆಲ್ಲ ನನ್ನ ನಂತ್ರ ಬರುವವನ ಪಾಲಾಗುತ್ತೆ.+
19 ಅವನು ವಿವೇಕಿಯೋ ಮೂರ್ಖನೋ ಯಾರಿಗೆ ಗೊತ್ತು?+ ಅವನು ಹೇಗೇ ಇದ್ರೂ ನಾನು ಇಷ್ಟು ಕಷ್ಟಪಟ್ಟು ವಿವೇಕದಿಂದ ಮಾಡಿದ್ದೆಲ್ಲ ಅವನ ಕೈಗೆ ಸೇರುತ್ತೆ. ಇದು ಕೂಡ ವ್ಯರ್ಥ.
20 ಇದನ್ನ ನೆನಸಿದಾಗ ಈ ಭೂಮಿ ಮೇಲೆ ನಾನು ಪರಿಶ್ರಮಪಟ್ಟು ಮಾಡಿದ ಎಲ್ಲ ಕೆಲಸಗಳ ಬಗ್ಗೆ ನನಗೆ ನಿರಾಶೆ ಆಯ್ತು.
21 ಒಬ್ಬ ವ್ಯಕ್ತಿ ವಿವೇಕ, ಜ್ಞಾನ, ಕೌಶಲದಿಂದ ಎಷ್ಟೇ ಕಷ್ಟಪಟ್ಟು ಏನೇ ಮಾಡಿದ್ರೂ ಅದನ್ನೆಲ್ಲ ಅದಕ್ಕಾಗಿ ಸ್ವಲ್ಪನೂ ಕಷ್ಟಪಡದವನಿಗೆ ಬಿಟ್ಟುಹೋಗಬೇಕಾಗುತ್ತೆ.+ ಇದೂ ವ್ಯರ್ಥ, ಅತಿ ದುರಂತಕರ.
22 ಒಬ್ಬ ಮನುಷ್ಯ ಭೂಮಿ ಮೇಲೆ ತನ್ನ ಆಸೆಯನ್ನ ಈಡೇರಿಸೋಕೆ ಬೆವರು ಸುರಿಸಿ ಎಷ್ಟೇ ದುಡಿದ್ರೂ ಅದ್ರಿಂದ ಅವನಿಗೆ ನಿಜವಾಗ್ಲೂ ಏನು ಸಿಗುತ್ತೆ?+
23 ಜೀವಮಾನ ಎಲ್ಲಾ ಅವನಿಗೆ ತನ್ನ ಕೆಲಸದಿಂದ ಸಿಗೋದು ನೋವು, ಕಿರಿಕಿರಿ ಅಷ್ಟೇ.+ ರಾತ್ರಿಯಲ್ಲೂ ಅವನ ಮನಸ್ಸಿಗೆ ನೆಮ್ಮದಿ ಇರಲ್ಲ.+ ಹಾಗಾಗಿ ಇದೂ ವ್ಯರ್ಥ.
24 ತಿನ್ನೋದು, ಕುಡಿಯೋದು ಮತ್ತು ಕಷ್ಟಪಟ್ಟು ಕೆಲಸ ಮಾಡೋದ್ರಲ್ಲಿ ಸಂತೋಷ ಪಡಿಯೋದು, ಇದಕ್ಕಿಂತ ಒಳ್ಳೇದು ಮನುಷ್ಯನಿಗೆ ಬೇರೆ ಯಾವುದೂ ಇಲ್ಲ.+ ಇವುಗಳನ್ನ ಕೂಡ ಸತ್ಯ ದೇವರೇ ಕೊಟ್ಟಿದ್ದಾನೆ ಅಂತ ಅರ್ಥ ಮಾಡ್ಕೊಂಡೆ.+
25 ಯಾಕಂದ್ರೆ ಎಲ್ರಿಗಿಂತ ಒಳ್ಳೇ ಆಹಾರ ಪಾನೀಯಗಳನ್ನ ತಿನ್ನುವವನು ನಾನೇ ಅಲ್ವಾ?+
26 ಸತ್ಯ ದೇವರು ತನ್ನ ಇಷ್ಟದ ಪ್ರಕಾರ ನಡಿಯುವವನಿಗೆ ವಿವೇಕ, ಜ್ಞಾನ ಮತ್ತು ಹರ್ಷಾನಂದ ಕೊಡ್ತಾನೆ.+ ಆದ್ರೆ ಪಾಪಿಗೆ ಏನ್ ಕೊಡ್ತಾನಂದ್ರೆ, ತನ್ನ ಇಷ್ಟದ ಪ್ರಕಾರ ನಡಿಯೋ ಜನ್ರಿಗಾಗಿ ಸಂಪತ್ತನ್ನ ಕೂಡಿಸಿಡೋ ಕೆಲಸ ಕೊಡ್ತಾನೆ.+ ಇದೂ ವ್ಯರ್ಥ, ಗಾಳಿ ಹಿಡಿಯೋಕೆ ಓಡೋ ಹಾಗಿದೆ.
ಪಾದಟಿಪ್ಪಣಿ
^ ಅಥವಾ “ಕಾಡಿಗಾಗಿ.”
^ ಅಥವಾ “ಪ್ರಸಿದ್ಧ ಸ್ತ್ರೀ, ಅನೇಕ ಪ್ರಸಿದ್ಧ ಸ್ತ್ರೀಯರ.”
^ ಅಕ್ಷ. “ಸೂರ್ಯನ ಕೆಳಗೆ.”
^ ಅಥವಾ “ವಿವೇಕಿಯ ಕಣ್ಣುಗಳು ತೆರೆದಿರುತ್ತೆ.”