ಮಾರ್ಕ 1:1-45
-
ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಸಾರ್ತಾ ಇದ್ದಾನೆ (1-8)
-
ಯೇಸುವಿನ ದೀಕ್ಷಾಸ್ನಾನ (9-11)
-
ಸೈತಾನ ಯೇಸುವನ್ನ ಪರೀಕ್ಷಿಸ್ತಾನೆ (12, 13)
-
ಗಲಿಲಾಯದಲ್ಲಿ ಯೇಸು ಸಾರೋಕೆ ಶುರುಮಾಡಿದನು (14, 15)
-
ಯೇಸುವಿನ ಮೊದಲ ಶಿಷ್ಯರು (16-20)
-
ಕೆಟ್ಟ ದೇವದೂತರನ್ನ ಯೇಸು ಬಿಡಿಸಿದನು (21-28)
-
ಕಪೆರ್ನೌಮಿನಲ್ಲಿ ಯೇಸು ತುಂಬ ಜನ್ರನ್ನ ವಾಸಿಮಾಡ್ತಾನೆ (29-34)
-
ದೂರದ ಒಂದು ಜಾಗಕ್ಕೆ ಹೋಗಿ ಪ್ರಾರ್ಥನೆ ಮಾಡಿದನು (35-39)
-
ಕುಷ್ಠರೋಗಿಯನ್ನ ವಾಸಿಮಾಡಿದನು (40-45)
1 ದೇವರ ಮಗನಾದ ಯೇಸು ಕ್ರಿಸ್ತನ ಬಗ್ಗೆ ಇರೋ ಸಿಹಿಸುದ್ದಿ ಹೀಗೆ ಶುರು ಆಗುತ್ತೆ:
2 ಪ್ರವಾದಿ ಯೆಶಾಯ ತನ್ನ ಪುಸ್ತಕದಲ್ಲಿ “(ನೋಡು! ನಾನು ನಿನಗಿಂತ ಮುಂಚೆ ಒಬ್ಬ ಸಂದೇಶವಾಹಕನನ್ನ ಕಳಿಸ್ತಾ ಇದ್ದೀನಿ. ಅವನು ನಿನ್ನ ದಾರಿ ಸಿದ್ಧ ಮಾಡ್ತಾನೆ.)+
3 ಯಾರೋ ಬಯಲು ಪ್ರದೇಶದಿಂದ ‘ಯೆಹೋವನ* ಮಾರ್ಗ ಸಿದ್ಧಮಾಡಿ! ಆತನ ದಾರಿ ಸರಾಗಮಾಡಿ’ ಅಂತ ಕೂಗಿ ಹೇಳ್ತಿದ್ದಾರೆ”+ ಅಂತ ಬರೆದಿದ್ದಾನೆ.
4 ಪ್ರವಾದಿ ಬರೆದ ಹಾಗೇ ಯೋಹಾನ* ಕಾಡಲ್ಲಿದ್ದ. ಅವನು ಜನ್ರಿಗೆ “ದೀಕ್ಷಾಸ್ನಾನ ಮಾಡಿಸ್ಕೊಂಡು ಪಶ್ಚಾತ್ತಾಪ ಪಟ್ಟಿದ್ದೀರ ಅಂತ ತೋರಿಸಿ. ಆಗ ದೇವರು ನಿಮ್ಮ ಪಾಪಗಳನ್ನ ಕ್ಷಮಿಸ್ತಾನೆ”+ ಅಂತ ಹೇಳ್ತಿದ್ದ.
5 ಇಡೀ ಯೂದಾಯದ ಜನ್ರು, ಯೆರೂಸಲೇಮಿನ ಜನ್ರು ಅವನ ಹತ್ರ ಹೋಗಿ ತಮ್ಮ ಪಾಪಗಳನ್ನ ಮುಚ್ಚುಮರೆ ಇಲ್ಲದೆ ಒಪ್ಕೊಂಡು ಯೋರ್ದನ್ ನದಿಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸ್ಕೊಳ್ತಿದ್ರು.*+
6 ಯೋಹಾನ ಒಂಟೆ ಕೂದಲಿನ ಬಟ್ಟೆ ಹಾಕೊಂಡು ಸೊಂಟಕ್ಕೆ+ ಚರ್ಮದ ಸೊಂಟಪಟ್ಟಿ ಕಟ್ಕೊಂಡಿದ್ದ. ಮಿಡತೆ, ಕಾಡುಜೇನು ತಿಂತಿದ್ದ.+
7 “ನನ್ನ ನಂತ್ರ ಬರೋನಿಗೆ ನನಗಿಂತ ಜಾಸ್ತಿ ಶಕ್ತಿ ಇದೆ. ಬಗ್ಗಿ ಆತನ ಚಪ್ಪಲಿ ಬಿಚ್ಚೋಕೂ ನಂಗೆ ಯೋಗ್ಯತೆ ಇಲ್ಲ.+
8 ನಾನು ನಿಮಗೆ ನೀರಲ್ಲಿ ದೀಕ್ಷಾಸ್ನಾನ ಮಾಡಿಸ್ತೀನಿ. ಆದ್ರೆ ಆತನು ನಿಮಗೆ ಪವಿತ್ರಶಕ್ತಿಯಿಂದ ದೀಕ್ಷಾಸ್ನಾನ ಮಾಡಿಸ್ತಾನೆ”+ ಅಂತ ಸಾರಿ ಹೇಳ್ತಿದ್ದ.
9 ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿಂದ ಬಂದು ಯೋರ್ದನ್ ನದಿಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸ್ಕೊಂಡನು.+
10 ಯೇಸು ನೀರಿಂದ ಮೇಲೆ ಬಂದ ತಕ್ಷಣ ಆಕಾಶ ತೆರೆದು ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ತನ್ನ ಮೇಲೆ ಬರೋದನ್ನ ನೋಡಿದನು.+
11 ಅಷ್ಟೇ ಅಲ್ಲ ಸ್ವರ್ಗದಿಂದ “ನೀನು ನನ್ನ ಪ್ರೀತಿಯ ಮಗ. ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅನ್ನೋ ಧ್ವನಿ ಕೇಳಿಸ್ತು.
12 ತಕ್ಷಣ ಅಲ್ಲಿಂದ ಬರಡು ಪ್ರದೇಶಕ್ಕೆ ಹೋಗೋಕೆ ಪವಿತ್ರಶಕ್ತಿ ಯೇಸುವನ್ನ ಪ್ರೇರಿಸಿತು.
13 ಕಾಡುಪ್ರಾಣಿಗಳಿದ್ದ ಆ ಪ್ರದೇಶದಲ್ಲಿ ಆತನು 40 ದಿನ ಇದ್ದನು. ಆ ಸಮಯದಲ್ಲಿ ಸೈತಾನ ಆತನನ್ನ ಪರೀಕ್ಷಿಸಿದ.+ ಆಮೇಲೆ ದೇವದೂತರು ಬಂದು ಆತನಿಗೆ ಸಹಾಯ ಮಾಡಿದ್ರು.+
14 ಯೋಹಾನನನ್ನ ಜೈಲಿಗೆ ಹಾಕಿದ್ರು. ಆಗ ಯೇಸು ಗಲಿಲಾಯಕ್ಕೆ ಹೋಗಿ+ ದೇವರ ಸಿಹಿಸುದ್ದಿ ಸಾರಿದನು.+
15 “ನಿರ್ಧರಿಸಿದ ಸಮಯ ಬಂದಿದೆ. ದೇವರ ಆಳ್ವಿಕೆ ಹತ್ರ ಇದೆ. ಪಶ್ಚಾತ್ತಾಪಪಡಿ,+ ಸಿಹಿಸುದ್ದಿಯಲ್ಲಿ ನಂಬಿಕೆ ಇಡಿ” ಅಂದನು.
16 ಯೇಸು ಗಲಿಲಾಯ ಸಮುದ್ರ ತೀರದಲ್ಲಿ ನಡಿತಿದ್ದಾಗ, ಬೆಸ್ತರಾಗಿದ್ದ ಸೀಮೋನ ಮತ್ತು ಅವನ ತಮ್ಮ ಅಂದ್ರೆಯ+ ಸಮುದ್ರದಲ್ಲಿ ಬಲೆ ಬೀಸೋದನ್ನ ನೋಡಿದನು.+
17 ಯೇಸು ಅವ್ರಿಗೆ “ನನ್ನ ಜೊತೆ ಬನ್ನಿ. ನಿಮ್ಮನ್ನ ಮನುಷ್ಯರನ್ನ ಹಿಡಿಯೋ ಬೆಸ್ತರಾಗಿ ಮಾಡ್ತೀನಿ”+ ಅಂದನು.
18 ತಕ್ಷಣ ಅವರು ಬಲೆ ಬಿಟ್ಟು ಆತನ ಜೊತೆ ಹೋದ್ರು.+
19 ಸ್ವಲ್ಪ ದೂರ ಹೋದಾಗ ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನ ಯೇಸು ನೋಡಿದನು. ಅವರು ಜೆಬೆದಾಯನ ಮಕ್ಕಳು. ಅವರು ತಮ್ಮ ದೋಣಿಯಲ್ಲಿ ಬಲೆ ಸರಿಮಾಡ್ತಿದ್ರು.+
20 ಆಗಲೇ ಯೇಸು ಅವರನ್ನೂ ಕರೆದನು. ಅವರು ತಮ್ಮ ತಂದೆ ಜೆಬೆದಾಯನನ್ನ ಕೆಲಸಗಾರರ ಜೊತೆ ದೋಣಿಯಲ್ಲೇ ಬಿಟ್ಟು ಆತನ ಜೊತೆ ಹೋದ್ರು.
21 ಅವ್ರೆಲ್ಲ ಕಪೆರ್ನೌಮಿಗೆ ಬಂದ್ರು.
ಸಬ್ಬತ್ ದಿನ ಶುರುವಾದ ತಕ್ಷಣ ಯೇಸು ಸಭಾಮಂದಿರಕ್ಕೆ ಹೋಗಿ ಕಲಿಸೋಕೆ ಶುರು ಮಾಡಿದನು.+
22 ಆತನು ಕಲಿಸೋ ರೀತಿ ನೋಡಿ ಜನ್ರಿಗೆ ತುಂಬ ಆಶ್ಚರ್ಯ ಆಯ್ತು. ಯಾಕಂದ್ರೆ ಆತನು ಪಂಡಿತರ* ಹಾಗೆ ಕಲಿಸದೆ ದೇವರಿಂದ ಅಧಿಕಾರ ಸಿಕ್ಕವನ ತರ ಕಲಿಸ್ತಿದ್ದನು.+
23 ಆ ಸಭಾಮಂದಿರದಲ್ಲಿ ಒಬ್ಬ ಮನುಷ್ಯನಿದ್ದ. ಅವನೊಳಗೆ ಕೆಟ್ಟ ದೇವದೂತ ಸೇರ್ಕೊಂಡಿದ್ದ.
24 ಅವನು “ನಜರೇತಿನ ಯೇಸು,+ ನೀನ್ಯಾಕೆ ಇಲ್ಲಿಗೆ ಬಂದೆ? ನಮ್ಮನ್ನ ನಾಶಮಾಡೋಕಂತ ಬಂದ್ಯಾ? ನೀನು ಯಾರಂತ ನನಗೆ ಚೆನ್ನಾಗಿ ಗೊತ್ತು. ನೀನು ದೇವರ ಪವಿತ್ರ ಮಗ”+ ಅಂತ ಕಿರುಚಿದ.
25 ಆದ್ರೆ ಯೇಸು “ಸುಮ್ಮನೆ ಅವನನ್ನ ಬಿಟ್ಟು ಹೊರಗೆ ಬಾ!” ಅಂತ ಗದರಿಸಿದನು.
26 ಆ ಕೆಟ್ಟ ದೇವದೂತ ಅವನನ್ನ ಒದ್ದಾಡಿಸಿ ಬೀಳಿಸಿ ಗಟ್ಟಿಯಾಗಿ ಕೂಗ್ತಾ ಅವನಿಂದ ಹೊರಗೆ ಬಂದ.
27 ಎಲ್ಲ ಜನ್ರಿಗೆ ತುಂಬ ಆಶ್ಚರ್ಯ ಆಯ್ತು. ಜನ್ರೆಲ್ಲ “ಇದೇನು? ಇವನು ಕಲಿಸೋ ರೀತಿ ಬೇರೆನೇ ಇದೆ! ಇವನಿಗೆ ಕೆಟ್ಟ ದೇವದೂತರನ್ನ ಬಿಡಿಸೋ ಅಧಿಕಾರ ಇದೆ. ಆ ಕೆಟ್ಟ ದೇವದೂತರೂ ಅವನ ಮಾತು ಕೇಳ್ತಾರೆ” ಅಂತ ಮಾತಾಡ್ಕೊಳ್ಳೋಕೆ ಶುರುಮಾಡಿದ್ರು.
28 ಹೀಗೆ ಈ ಸುದ್ದಿ ಬೇಗ ಗಲಿಲಾಯ ಪ್ರಾಂತ್ಯದ ಮೂಲೆಮೂಲೆಗೂ ಹಬ್ಬಿತು.
29 ಯೇಸು ಸಭಾಮಂದಿರದಿಂದ ಸೀಮೋನ ಮತ್ತು ಅಂದ್ರೆಯರ ಜೊತೆ ಅವ್ರ ಮನೆಗೆ ಹೋದನು. ಅವ್ರ ಜೊತೆ ಯಾಕೋಬ, ಯೋಹಾನ ಕೂಡ ಇದ್ರು.+
30 ಸೀಮೋನನ ಅತ್ತೆಗೆ+ ಜ್ವರ ಬಂದು ಹಾಸಿಗೆ ಹಿಡಿದಿದ್ದಳು. ಅವರು ತಕ್ಷಣ ಆ ವಿಷ್ಯವನ್ನ ಯೇಸುಗೆ ಹೇಳಿದ್ರು.
31 ಆತನು ಅವಳ ಹತ್ರ ಹೋಗಿ ಅವಳ ಕೈಹಿಡಿದು ಎಬ್ಬಿಸಿದನು. ಅವಳು ಹುಷಾರಾಗಿ ಎದ್ದು ಅವ್ರಿಗೆ ಅಡುಗೆ ಮಾಡೋಕೆ ಶುರುಮಾಡಿದಳು.
32 ಸಂಜೆ ಸೂರ್ಯ ಮುಳುಗಿದ ಮೇಲೆ ಜನ ಎಲ್ಲ ರೋಗಿಗಳನ್ನ, ಕೆಟ್ಟ ದೇವದೂತರು ಹಿಡಿದ ಜನ್ರನ್ನ ಯೇಸು ಹತ್ರ ಕರ್ಕೊಂಡು ಬಂದ್ರು.+
33 ಹೀಗೆ ಊರಿಗೆ ಊರೇ ಮನೆಬಾಗಿಲಲ್ಲಿ ಸೇರಿತ್ತು.
34 ಆತನು ಬೇರೆಬೇರೆ ರೋಗಗಳಿಂದ ನರಳ್ತಿದ್ದ ಜನ್ರನ್ನ ವಾಸಿಮಾಡಿದನು.+ ಅನೇಕ ಕೆಟ್ಟ ದೇವದೂತರನ್ನೂ ಬಿಡಿಸಿದನು. ಆದ್ರೆ ಆ ಕೆಟ್ಟ ದೇವದೂತರಿಗೆ ಆತನು ಕ್ರಿಸ್ತ ಅಂತ ಗೊತ್ತಿದ್ರಿಂದ ಯೇಸು ಅವ್ರಿಗೆ ಮಾತಾಡೋಕೆ ಬಿಡಲಿಲ್ಲ.
35 ಬೆಳಬೆಳಿಗ್ಗೆ ಇನ್ನೂ ಕತ್ತಲೆ ಇರುವಾಗಲೇ ಯೇಸು ಎದ್ದು ದೂರದ ಒಂದು ಜಾಗಕ್ಕೆ ಹೋಗಿ ಅಲ್ಲಿ ಪ್ರಾರ್ಥನೆ ಮಾಡೋಕೆ ಶುರುಮಾಡಿದನು.+
36 ಆದ್ರೆ ಸೀಮೋನ ಮತ್ತು ಅವನ ಜೊತೆ ಇದ್ದವರು ಆತನನ್ನ ಹುಡುಕ್ತಾ ಹೋದ್ರು.
37 ಆತನು ಸಿಕ್ಕಿದಾಗ “ಎಲ್ರೂ ನಿನ್ನನ್ನ ಹುಡುಕ್ತಾ ಇದ್ದಾರೆ” ಅಂದ್ರು.
38 ಆದ್ರೆ ಆತನು “ನಾವು ಹತ್ರ ಇರೋ ಬೇರೆ ಊರುಗಳಿಗೆ ಹೋಗೋಣ. ಅಲ್ಲೂ ಸಿಹಿಸುದ್ದಿ ಸಾರಬೇಕು. ನಾನು ಬಂದಿರೋದೇ ಆ ಕೆಲಸ ಮಾಡೋಕೆ”+ ಅಂದನು.
39 ಆತನು ಅಲ್ಲಿಂದ ಹೋಗಿ ಗಲಿಲಾಯದಲ್ಲಿ ಇರೋ ಸಭಾಮಂದಿರಗಳಲ್ಲಿ ಸಾರಿದನು, ಕೆಟ್ಟ ದೇವದೂತರನ್ನ ಓಡಿಸಿದನು.+
40 ಆಮೇಲೆ ಒಬ್ಬ ಕುಷ್ಠರೋಗಿ ಆತನ ಹತ್ರ ಬಂದು ಮಂಡಿಯೂರಿ “ಸ್ವಾಮಿ, ನಿಂಗೆ ಇಷ್ಟ ಇದ್ರೆ ನನ್ನನ್ನ ವಾಸಿಮಾಡು” ಅಂತ ಬೇಡ್ಕೊಂಡ.+
41 ಯೇಸುಗೆ ಮನಸ್ಸು ಕರಗಿ ಕೈಚಾಚಿ ಅವನನ್ನ ಮುಟ್ಟಿ “ನಿನ್ನನ್ನ ವಾಸಿಮಾಡೋಕೆ ನಂಗಿಷ್ಟ ಇದೆ”+ ಅಂದನು.
42 ತಕ್ಷಣ ಕುಷ್ಠ ಮಾಯ ಆಗಿ, ಅವನಿಗೆ ವಾಸಿ ಆಯ್ತು.
43 ಆಮೇಲೆ ಆ ಮನುಷ್ಯನಿಗೆ ಯೇಸು ಕಟ್ಟುನಿಟ್ಟಾಗಿ ಅಪ್ಪಣೆ ಕೊಟ್ಟು ಕಳಿಸಿದ.
44 ಅದೇನಂದ್ರೆ “ನೋಡು, ಇದನ್ನ ಯಾರಿಗೂ ಹೇಳಬೇಡ. ಆದ್ರೆ ಹೋಗಿ ಪುರೋಹಿತನಿಗೆ ನಿನ್ನನ್ನ ತೋರಿಸ್ಕೊ. ಮೋಶೆಯ ನಿಯಮದಲ್ಲಿ ಹೇಳಿದ ಹಾಗೆ ಉಡುಗೊರೆ ಅರ್ಪಿಸು.+ ಇದು ಅವ್ರಿಗೆ ಸಾಕ್ಷಿಯಾಗಿರಲಿ”+ ಅಂದನು.
45 ಆದ್ರೆ ಆ ಮನುಷ್ಯ ಹೋದಲ್ಲೆಲ್ಲ ಈ ವಿಷ್ಯ ಹೇಳಿ, ಇಡೀ ಊರಿಗೇ ಹಬ್ಬಿಸಿದ. ಇದ್ರಿಂದಾಗಿ ಯೇಸುಗೆ ಯಾವ ಊರೊಳಗೂ ಕಾಲಿಡೋಕೆ ಆಗಲಿಲ್ಲ. ಊರ ಹೊರಗೆ ದೂರದ ಸ್ಥಳಗಳಲ್ಲಿ ಇರಬೇಕಾಗಿ ಬಂತು. ಆದ್ರೂ ಯೇಸುವನ್ನ ಹುಡ್ಕೊಂಡು ಜನ ಎಲ್ಲ ಕಡೆಯಿಂದ ಆತನ ಹತ್ರ ಬರ್ತಿದ್ರು.+
ಪಾದಟಿಪ್ಪಣಿ
^ ಪರಿಶಿಷ್ಟ ಎ5 ನೋಡಿ.
^ ಅಕ್ಷ. “ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ.”
^ ಅಥವಾ “ಅವನಿಂದ ಅದ್ದಿಸ್ಕೊಳ್ತಿದ್ರು; ಮುಳುಗಿಸ್ಕೊಳ್ತಿದ್ರು.”