ಯೆಶಾಯ 42:1-25

  • ದೇವರ ಸೇವಕ ಮತ್ತು ಆತನ ನೇಮಕ (1-9)

    • ‘ಯೆಹೋವ ನನ್ನ ಹೆಸ್ರು’ (8)

  • ಯೆಹೋವನನ್ನ ಹೊಗಳೋಕೆ ಹೊಸ ಹಾಡು (10-17)

  • ಇಸ್ರಾಯೇಲಿಗೆ ಕಣ್ಣು ಕಾಣಲ್ಲ ಮತ್ತು ಕಿವಿ ಕೇಳಿಸಲ್ಲ (18-25)

42  ನೋಡಿ! ನಾನು ಬೆಂಬಲಿಸೋ ನನ್ನ ಸೇವಕ!+ ನಾನು ಅವನನ್ನ ಆರಿಸಿದ್ದೀನಿ,+ ಅವನು ಮಾಡೋದೆಲ್ಲ ನಂಗೆ ಖುಷಿ ತರುತ್ತೆ!+ ನಾನು ನನ್ನ ಪವಿತ್ರಶಕ್ತಿಯನ್ನ ಅವನಲ್ಲಿ ಇಟ್ಟಿದ್ದೀನಿ.+ ಅವನು ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+   ಅವನು ಕೂಗಾಡಲ್ಲ ಅಥವಾ ತನ್ನ ಧ್ವನಿ ಎತ್ತಿ ಮಾತಾಡಲ್ಲತನ್ನ ಸ್ವರ ಬೀದಿಯಲ್ಲಿ ಕೇಳೋ ತರ ಬಿಡಲ್ಲ.+   ಅವನು ಜಜ್ಜಿದ ದಂಟನ್ನ ಮುರಿಯಲ್ಲ,+ಆರಿಹೋಗೋ ದೀಪವನ್ನ ಆರಿಸಲ್ಲ. ನಂಬಿಗಸ್ತಿಕೆಯಿಂದ ಅವನು ನ್ಯಾಯವನ್ನ ದೊರಕಿಸ್ಕೊಡ್ತಾನೆ.+   ಭೂಮಿ ಮೇಲೆ ನ್ಯಾಯವನ್ನ ಸ್ಥಾಪಿಸೋ ತನಕ ಅವನು ಮಂಕಾಗಲ್ಲ ಅಥವಾ ಜಜ್ಜಿಹೋಗಲ್ಲ.+ ಅವನ ನಿಯಮಕ್ಕಾಗಿ* ದ್ವೀಪಗಳು ಕಾಯ್ತಾ ಇರ್ತವೆ.   ಆಕಾಶ ಸೃಷ್ಟಿಸಿ ಅದನ್ನ ಹರಡಿರೋ,+ಭೂಮಿ ಮತ್ತು ಅದ್ರ ಮೇಲಿರೋ ಎಲ್ಲವನ್ನ ರಚಿಸಿರೋ,+ಭೂಮಿ ಮೇಲಿರೋ ಮಾನವ್ರಿಗೆ ಉಸಿರನ್ನ ಕೊಟ್ಟಿರೋ,+ಅದ್ರಲ್ಲಿ ನಡೆಯುವವ್ರಿಗೆ ಜೀವಶಕ್ತಿಯನ್ನ ನೀಡಿರೋ,+ಮಹಾನ್‌ ಸತ್ಯ ದೇವರಾದ ಯೆಹೋವ ಹೀಗೆ ಹೇಳ್ತಾನೆ   “ನೀತಿಯಿಂದ ನಡ್ಕೊಳ್ಳೋ ಯೆಹೋವನಾದ ನಾನು, ನಿನ್ನನ್ನ ಕರೆದಿದ್ದೀನಿ. ನಾನು ನಿನ್ನ ಕೈ ಹಿಡ್ಕೊಂಡಿದ್ದೀನಿ. ನಾನು ನಿನ್ನನ್ನ ಕಾದುಕಾಪಾಡ್ತೀನಿ. ನನ್ನ ಮತ್ತು ಜನ್ರ ಮಧ್ಯ ನೀನು ಒಂದು ಒಪ್ಪಂದ ಆಗೋ ತರ+ಜನಾಂಗಗಳಿಗೆ ನೀನು ಬೆಳಕಾಗೋ ತರ ಮಾಡ್ತೀನಿ.+   ನೀನು ಕುರುಡನ ಕಣ್ಣುಗಳನ್ನ ತೆರಿಯೋಕೆ,+ಸೆರೆಯಿಂದ ಕೈದಿಯನ್ನ ಬಿಡಿಸೋಕೆ,ಸೆರೆಯ ಅಂಧಕಾರದಲ್ಲಿ ಕುಳಿತಿರುವವ್ರನ್ನ ಹೊರತರೋಕೆ ನಾನು ಹೀಗೆ ಮಾಡ್ತೀನಿ.+   ನಾನು ಯೆಹೋವ. ಇದು ನನ್ನ ಹೆಸ್ರು,ನನಗೆ ಸಿಗಬೇಕಾದ ಮಹಿಮೆಯನ್ನ ನಾನು ಬೇರೆ ಯಾರ ಜೊತೆನೂ ಹಂಚ್ಕೊಳ್ಳಲ್ಲ,*ನನಗೆ ಸಲ್ಲಬೇಕಾದ ಸ್ತುತಿ ಕೆತ್ತಿದ ಮೂರ್ತಿಗಳಿಗೆ ಸಲ್ಲೋಕೆ ನಾನು ಬಿಡಲ್ಲ.+   ನೋಡಿ, ತುಂಬ ಹಿಂದೆನೇ ಹೇಳಿದ ವಿಷ್ಯಗಳು ನೆರವೇರಿವೆ,ಈಗ ನಾನು ಹೊಸ ವಿಷ್ಯಗಳನ್ನ ಹೇಳ್ತಿದ್ದೀನಿ. ಅವು ಶುರು ಆಗೋದಕ್ಕಿಂತ ಮುಂಚೆನೇ ನಾನು ನಿಮಗೆ ಅವುಗಳ ಬಗ್ಗೆ ತಿಳಿಸ್ತೀನಿ.”+ 10  ಸಮುದ್ರ ಮತ್ತು ಅದ್ರಲ್ಲಿ ಜೀವಿಸೋ ಜಲಚರಗಳ ಮಧ್ಯ ಪ್ರಯಾಣಿಸುವವರೇ,ದ್ವೀಪಗಳೇ ಮತ್ತು ಅದ್ರ ನಿವಾಸಿಗಳೇ,+ಯೆಹೋವನಿಗಾಗಿ ಒಂದು ಹೊಸ ಹಾಡನ್ನ ಹಾಡಿ,+ಭೂಮಿಯ ಕಟ್ಟಕಡೆಯಿಂದ ಆತನನ್ನ ಸ್ತುತಿಸಿ.+ 11  ಕಾಡು ಮತ್ತು ಅದ್ರ ಪಟ್ಟಣಗಳು,ಕೇದಾರಿನ+ ನಿವಾಸಿಗಳ ಹಳ್ಳಿಗಳು ತಮ್ಮ ಧ್ವನಿಯನ್ನ ಎತ್ತಲಿ.+ ಕಡಿದಾದ ಬಂಡೆಗಳ ಮಧ್ಯೆ ವಾಸಿಸುವವರು ಹರ್ಷದಿಂದ ಕೂಗಲಿ. ಬೆಟ್ಟದ ತುದಿಯಿಂದ ಅವರು ಆರ್ಭಟಿಸಲಿ. 12  ಅವರು ಯೆಹೋವನಿಗೆ ಗೌರವವನ್ನ ಸಲ್ಲಿಸಲಿ,ದ್ವೀಪಗಳಲ್ಲೂ ಆತನನ್ನ ಸ್ತುತಿಸಲಿ.+ 13  ಯೆಹೋವ ಒಬ್ಬ ಬಲಿಷ್ಠ ವ್ಯಕ್ತಿ ತರ ಹೊರಟು,+ವೀರ ಸೈನಿಕನ ತರ ಹುರುಪಿಂದ ಕೆಲಸಮಾಡ್ತಾನೆ.+ ಆತನು ಆರ್ಭಟಿಸ್ತಾನೆ. ಹೌದು, ಯುದ್ಧವನ್ನ ಘೋಷಿಸ್ತಾನೆ. ತನ್ನ ಶತ್ರುಗಳಿಗಿಂತ ತಾನು ಬಲಿಷ್ಠ ಅಂತ ತೋರಿಸ್ತಾನೆ.+ 14  “ನಾನು ತುಂಬ ಕಾಲದ ತನಕ ಸುಮ್ಮನಿದ್ದೆ. ನಾನು ಮೌನವಾಗಿದ್ದು, ನನ್ನನ್ನೇ ನಾನು ತಡೆದೆ. ಮಗುವನ್ನ ಹೆರೋ ಸ್ತ್ರೀ ತರ,ನಾನು ಒಂದೇ ಸಮನೆ ಗೋಳಾಡ್ತೀನಿ, ಮೇಲುಸಿರು ಎಳಿತೀನಿ, ಏದುಸಿರು ಬಿಡ್ತೀನಿ. 15  ನಾನು ಪರ್ವತಗಳನ್ನ ಮತ್ತು ಬೆಟ್ಟಗಳನ್ನ ಧ್ವಂಸಮಾಡ್ತೀನಿ. ಅವುಗಳ ಬೆಳೆಯನ್ನೆಲ್ಲಾ ಒಣಗಿಸಿಬಿಡ್ತೀನಿ. ನದಿಗಳನ್ನ ದ್ವೀಪಗಳನ್ನಾಗಿ* ಬದಲಾಯಿಸ್ತೀನಿ. ಆಪುಹುಲ್ಲಿರೋ ಕೆರೆಗಳು ಬತ್ತಿ ಹೋಗೋ ತರ ಮಾಡ್ತೀನಿ.+ 16  ಕುರುಡರನ್ನ ಅವ್ರಿಗೆ ಗೊತ್ತಿಲ್ಲದ ಮಾರ್ಗದಲ್ಲಿ ನಾನು ನಡಿಸ್ತೀನಿ,+ಅವ್ರಿಗೆ ಪರಿಚಯ ಇಲ್ಲದ ದಾರಿಗಳಲ್ಲಿ ಅವರು ನಡೆಯೋ ಹಾಗೆ ಮಾಡ್ತೀನಿ.+ ಅವ್ರ ಮುಂದಿರೋ ಅಂಧಕಾರವನ್ನ ಬೆಳಕನ್ನಾಗಿ ಬದಲಾಯಿಸ್ತೀನಿ,+ಏರುಪೇರಾದ ಭೂಪ್ರದೇಶವನ್ನ ಸಮತಟ್ಟಾದ ನೆಲವನ್ನಾಗಿ ಬದಲಾಯಿಸ್ತೀನಿ.+ ನಾನು ಅವ್ರಿಗಾಗಿ ಇದನ್ನೆಲ್ಲಾ ಮಾಡ್ತೀನಿ, ಅವ್ರನ್ನ ನಾನು ತೊರೆಯಲ್ಲ.” 17  ಕೆತ್ತಿದ ಮೂರ್ತಿಗಳಲ್ಲಿ ಭರವಸೆ ಇಡುವವರು,ಅಚ್ಚಲ್ಲಿ ಹೊಯ್ದ ಮೂರ್ತಿಗಳಿಗೆ “ನೀವೇ ನಮ್ಮ ದೇವರುಗಳು” ಅಂತ ಹೇಳುವವರುತೀರಾ ಅವಮಾನಕ್ಕೆ ಗುರಿಯಾಗ್ತಾರೆ, ಸೋತುಹೋಗ್ತಾರೆ.+ 18  ಕಿವುಡರೇ, ಕೇಳಿಸ್ಕೊಳ್ಳಿ. ಕುರುಡರೇ, ಕಣ್ಣು ತೆರೆದು ನೋಡಿ.+ 19  ನನ್ನ ಸೇವಕನಲ್ಲದೆ* ಬೇರೆ ಯಾವ ಕುರುಡನಿದ್ದಾನೆ? ನಾನು ಕಳಿಸೋ ಸಂದೇಶವಾಹಕನನ್ನ ಬಿಟ್ಟು ಬೇರೆ ಯಾವ ಕಿವುಡನಿದ್ದಾನೆ? ನಾನು ಯಾರಿಗೆ ಪ್ರತಿಫಲ ಕೊಟ್ಟೆನೋ ಅವನಂಥ ಕುರುಡ ಯಾರಿದ್ದಾನೆ? ಹೌದು, ಯೆಹೋವನ ಸೇವಕನಂಥ ಕುರುಡ ಯಾರಿದ್ದಾನೆ?+ 20  ನೀವು ತುಂಬ ವಿಷ್ಯಗಳನ್ನ ನೋಡಿದ್ರೂ, ಗಮನಕೊಡಲಿಲ್ಲ. ನಿಮ್ಮ ಕಿವಿಗಳು ತೆರೆದಿದ್ರೂ ಕೇಳಿಸ್ಕೊಳ್ಳಲಿಲ್ಲ.+ 21  ಯೆಹೋವ ತನ್ನ ನೀತಿಯ ನಿಮಿತ್ತ,ತನ್ನ ನಿಯಮ ಪುಸ್ತಕವನ್ನ* ಘನತೆಗೇರಿಸೋದ್ರಲ್ಲಿ, ಅದನ್ನ ಮಹಿಮೆಪಡಿಸೋದ್ರಲ್ಲಿ ಸಂತೋಷಪಟ್ಟನು. 22  ಆದ್ರೆ ಈ ಜನ್ರನ್ನ ಕೊಳ್ಳೆ ಹೊಡೆಯಲಾಗಿದೆ, ಲೂಟಿ ಮಾಡಲಾಗಿದೆ.+ ಅವ್ರೆಲ್ಲ ಗುಹೆಗಳಲ್ಲಿ ಸಿಕ್ಕಿಹಾಕೊಂಡಿದ್ದಾರೆ, ಸೆರೆಯಲ್ಲಿ ಅಡಗಿಕೊಂಡಿದ್ದಾರೆ.+ ಅವ್ರನ್ನ ಕೊಳ್ಳೆ ಹೊಡೆಯುವವರು ಇದ್ದಾರೇ ಹೊರತು ರಕ್ಷಿಸುವವರು ಯಾರೂ ಇಲ್ಲ,+ಅವ್ರನ್ನ ಲೂಟಿ ಮಾಡುವವರು ಇದ್ದಾರೇ ಹೊರತು “ಅವ್ರನ್ನ ಹಿಂದೆ ಕರ್ಕೊಂಡು ಬನ್ನಿ” ಅಂತ ಹೇಳುವವರು ಯಾರೂ ಇಲ್ಲ. 23  ನಿಮ್ಮಲ್ಲಿ ಯಾರು ಇದನ್ನ ಕೇಳಿಸ್ಕೊಳ್ತೀರ? ಬರಲಿರೋ ಭವಿಷ್ಯತ್ತನ್ನ ಮನಸ್ಸಲ್ಲಿಟ್ಕೊಂಡು ಯಾರು ಇದಕ್ಕೆ ಗಮನಕೊಡ್ತೀರ? 24  ಯಾಕೋಬನನ್ನ ಲೂಟಿ ಮಾಡೋಕೆ,ಇಸ್ರಾಯೇಲನ್ನ ಕೊಳ್ಳೆ ಹೊಡೆಯೋಕೆ ಯಾರು ಬಿಟ್ರು? ನಾವು ಯಾರ ವಿರುದ್ಧ ಪಾಪಮಾಡಿದೆವೋ ಆ ಯೆಹೋವನೇ ಅಲ್ವಾ? ಆತನ ಮಾರ್ಗಗಳಲ್ಲಿ ನಡೆಯೋಕೆ ಅವರು ನಿರಾಕರಿಸಿದ್ರು,ಆತನ ನಿಯಮಕ್ಕೆ* ಅವರು ವಿಧೇಯತೆ ತೋರಿಸಲಿಲ್ಲ.+ 25  ಹಾಗಾಗಿ ಆತನು ಅವ್ರ ಮೇಲೆ ತನ್ನ ಕ್ರೋಧವನ್ನ, ತನ್ನ ಕೋಪವನ್ನ ಮತ್ತು ಯುದ್ಧದ ಕ್ರೂರತೆಯನ್ನ ಸುರಿದನು.+ ಯುದ್ಧ ಅವ್ರ ಸುತ್ತಲೂ ಇದ್ದ ಎಲ್ಲವನ್ನೂ ನುಂಗಿಹಾಕ್ತು. ಆದ್ರೂ ಅವರು ಗಮನಕೊಡಲಿಲ್ಲ.+ ಅದು ಅವ್ರ ವಿರುದ್ಧ ಹೊತ್ತಿ ಉರಿತು. ಆದ್ರೆ ಅವರು ಅದನ್ನ ಮನಸ್ಸಿಗೆ ಹಾಕೊಳ್ಳಲಿಲ್ಲ.+

ಪಾದಟಿಪ್ಪಣಿ

ಅಥವಾ “ನಿರ್ದೇಶನಕ್ಕಾಗಿ.”
ಅಕ್ಷ. “ನನಗೆ ಸಿಗಬೇಕಾದ ಮಹಿಮೆಯನ್ನ ನಾನು ಯಾರಿಗೂ ಕೊಡಲ್ಲ.”
ಅಥವಾ “ಕರಾವಳಿ ಪ್ರದೇಶಗಳನ್ನಾಗಿ.”
ಖಂಡಿತ ಇಲ್ಲಿ ಇಸ್ರಾಯೇಲ್‌ ಜನಾಂಗವನ್ನ ಸೂಚಿಸಿ ಮಾತಾಡಲಾಗ್ತಿದೆ.
ಅಥವಾ “ಬೋಧನೆಯನ್ನ.”
ಅಥವಾ “ಬೋಧನೆಗೆ.”