ಯೋಹಾನ 16:1-33
16 ನೀವು ನಂಬಿಕೆ ಕಳ್ಕೊಬಾರದು ಅಂತ ಈ ಎಲ್ಲಾ ವಿಷ್ಯ ಹೇಳ್ತಾ ಇದ್ದೀನಿ.
2 ಜನ ನಿಮ್ಮನ್ನ ಸಭಾಮಂದಿರದಿಂದ ಹೊರಗೆ ಹಾಕ್ತಾರೆ.+ ನಿಮ್ಮ ಪ್ರಾಣ ತೆಗಿಯುವವರು+ ‘ದೇವರ ಪವಿತ್ರ ಸೇವೆ ಮಾಡಿದ್ದೀನಿ’ ಅಂತ ನೆನಸೋ ಕಾಲ ಬರುತ್ತೆ.
3 ಅವ್ರಿಗೆ ನನ್ನ ಬಗ್ಗೆ ಆಗಲಿ ನನ್ನ ಅಪ್ಪನ ಬಗ್ಗೆ ಆಗಲಿ ಗೊತ್ತಿಲ್ಲ. ಅದಕ್ಕೇ ಹಾಗೆ ಮಾಡ್ತಾರೆ.+
4 ಹಾಗಿದ್ರೂ ಇದನ್ನೆಲ್ಲ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ಅಂಥ ಪರಿಸ್ಥಿತಿ ಬಂದಾಗ ‘ಯೇಸು ಇದನ್ನೆಲ್ಲ ಹೇಳಿದ್ದನಲ್ವಾ?’ ಅಂತ ನೀವು ನೆನಪಿಸ್ಕೊಬೇಕು.+
ಇದನ್ನೆಲ್ಲ ನಾನು ಮುಂಚೆನೇ ಹೇಳಲಿಲ್ಲ. ಯಾಕಂದ್ರೆ ಆಗ ನಿಮ್ಮ ಜೊತೆ ನಾನಿದ್ದೆ.
5 ಆದ್ರೆ ಈಗ ನನ್ನನ್ನ ಕಳಿಸಿದ ಅಪ್ಪನ ಹತ್ರ ಹೋಗ್ತಾ ಇದ್ದೀನಿ.+ ‘ಎಲ್ಲಿಗೆ ಹೋಗ್ತಾ ಇದ್ಯಾ’ ಅಂತ ನೀವ್ಯಾರೂ ಯಾಕೆ ಕೇಳ್ತಾ ಇಲ್ಲ?
6 ಯಾಕಂದ್ರೆ ಈ ವಿಷ್ಯ ಕೇಳಿ ನಿಮಗೆ ತುಂಬಾ ಬೇಜಾರಾಗಿದೆ.+
7 ಆದ್ರೆ ನಿಜ ಹೇಳ್ತೀನಿ, ನಾನು ಹೋಗ್ತಿರೋದು ನಿಮ್ಮ ಪ್ರಯೋಜನಕ್ಕೇ. ನಾನು ಹೋಗದಿದ್ರೆ ಆ ಸಹಾಯಕ*+ ನಿಮ್ಮ ಹತ್ರ ಬರಲ್ಲ. ನಾನು ಹೋದ್ರೆನೇ ಅವನನ್ನ ನಿಮ್ಮ ಹತ್ರ ಕಳಿಸೋಕಾಗೋದು.
8 ಆ ಸಹಾಯಕ ಬಂದಾಗ ಎಲ್ಲ ಜನ್ರಿಗೆ ಪಾಪ ಅಂದ್ರೇನು, ಒಳ್ಳೇ ಕೆಲಸಗಳು ಅಂದ್ರೇನು, ದೇವರು ಕೊಡೋ ಶಿಕ್ಷೆ ಏನು ಅಂತ ಚೆನ್ನಾಗಿ ಅರ್ಥ ಮಾಡಿಸ್ತಾನೆ.
9 ಮೊದಲು ಪಾಪದ+ ಬಗ್ಗೆ ಅರ್ಥ ಮಾಡಿಸ್ತಾನೆ. ಯಾಕಂದ್ರೆ ಜನ್ರಿಗೆ ನನ್ನ ಮೇಲೆ ನಂಬಿಕೆ ಇಲ್ಲ.+
10 ಒಳ್ಳೇ ಕೆಲಸಗಳನ್ನ ಅರ್ಥ ಮಾಡಿಸ್ತಾನೆ. ಯಾಕಂದ್ರೆ ನಾನು ಅಪ್ಪನ ಹತ್ರ ಹೋಗೋದ್ರಿಂದ ಇನ್ನು ಮುಂದೆ ನಿಮಗೆ ನನ್ನನ್ನ ನೋಡಕ್ಕಾಗಲ್ಲ.
11 ಆಮೇಲೆ ಲೋಕದ ನಾಯಕನಿಗೆ ಕೊಡೋ ಶಿಕ್ಷೆ ಏನಂತ ಅರ್ಥ ಮಾಡಿಸ್ತಾನೆ. ಯಾಕಂದ್ರೆ ಅವನಿಗೆ ಆ ಶಿಕ್ಷೆ ಏನಂತ ಈಗಾಗಲೇ ದೇವರು ಹೇಳಿದ್ದಾನೆ.+
12 ಹೇಳೋಕೆ ಇನ್ನೂ ತುಂಬಾ ವಿಷ್ಯ ಇದೆ. ಆದ್ರೆ ಈಗ ನಿಮಗೆ ಅದನ್ನೆಲ್ಲ ಅರ್ಥ ಮಾಡ್ಕೊಳ್ಳೋಕಾಗಲ್ಲ.
13 ಆ ಸಹಾಯಕ ಅಂದ್ರೆ ಸತ್ಯ ಯಾವುದು ಅಂತ ತೋರಿಸೋ ಪವಿತ್ರಶಕ್ತಿ+ ಬಂದಾಗ ಸತ್ಯವನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ನಿಮಗೆ ಸಹಾಯ ಮಾಡ್ತಾನೆ. ಯಾಕಂದ್ರೆ ಆ ಸಹಾಯಕ ತನ್ನ ಸ್ವಂತ ವಿಚಾರಗಳನ್ನ ಮಾತಾಡದೆ ದೇವ್ರಿಂದ ಕೇಳಿಸ್ಕೊಂಡಿದ್ದನ್ನೇ ಮಾತಾಡ್ತಾನೆ. ಮುಂದೆ ಆಗೋ ವಿಷ್ಯಗಳನ್ನ ನಿಮಗೆ ಹೇಳ್ತಾನೆ.+
14 ಆ ಸಹಾಯಕ ಬರುವಾಗ ನನಗೆ ಗೌರವ ಸಿಗುತ್ತೆ.+ ಯಾಕಂದ್ರೆ ನನ್ನ ಹತ್ರ ಕೇಳಿಸ್ಕೊಂಡಿದ್ದನ್ನೇ ಅವನು ನಿಮಗೆ ಹೇಳ್ತಾನೆ.+
15 ನನ್ನ ಅಪ್ಪನ ಹತ್ರ ಇರೋದೆಲ್ಲ ನನ್ನದೇ.+ ಅದಕ್ಕೇ ನಾನು ‘ನನ್ನ ಹತ್ರ ಕೇಳಿಸ್ಕೊಂಡದ್ದನ್ನೇ ನಿಮಗೆ ಹೇಳ್ತಾನೆ’ ಅಂತ ಹೇಳ್ದೆ.
16 ಸ್ವಲ್ಪ ಸಮಯ ಆದ ಮೇಲೆ ನೀವು ನನ್ನನ್ನ ನೋಡಲ್ಲ.+ ಸ್ವಲ್ಪ ಸಮಯ ಆದ ಮೇಲೆ ನನ್ನನ್ನ ನೋಡ್ತೀರ.”
17 ಆಗ ಕೆಲವು ಶಿಷ್ಯರು “ಯೇಸು ‘ಸ್ವಲ್ಪ ಸಮಯ ಆದಮೇಲೆ ನೀವು ನನ್ನನ್ನ ನೋಡಲ್ಲ. ಆದ್ರೆ ಇನ್ನೂ ಸ್ವಲ್ಪ ಸಮಯ ಆದಮೇಲೆ ನನ್ನನ್ನ ನೋಡ್ತೀರ’ ಮತ್ತು ‘ನಾನು ಅಪ್ಪನ ಹತ್ರ ಹೋಗೋದ್ರಿಂದ’ ಅಂತ ಹೇಳ್ತಿದ್ದಾನಲ್ಲಾ, ಅದ್ರ ಅರ್ಥ ಏನು?” ಅಂತ ಮಾತಾಡ್ಕೊಂಡ್ರು.
18 “‘ಸ್ವಲ್ಪ ಸಮಯ ಆದಮೇಲೆ’ ಅಂತ ಯೇಸು ಹೇಳ್ತಿರೋದರ ಅರ್ಥ ಏನು? ಯಾವುದರ ಬಗ್ಗೆ ಹೇಳ್ತಾ ಇದ್ದಾನೋ ಏನೊ?” ಅಂತ ಮಾತಾಡ್ಕೊಂಡ್ರು.
19 ಶಿಷ್ಯರು ತನ್ನ ಹತ್ರ ಏನೋ ಕೇಳಬೇಕಂತ ಇದ್ದಾರೆ ಅಂತ ಯೇಸುಗೆ ಗೊತ್ತಾಯ್ತು. ಆಗ ಯೇಸು “‘ಸ್ವಲ್ಪ ಸಮಯ ಆದಮೇಲೆ ನೀವು ನನ್ನನ್ನ ನೋಡಲ್ಲ. ಆದ್ರೆ ಸ್ವಲ್ಪ ಸಮಯ ಆದಮೇಲೆ ನನ್ನನ್ನ ನೋಡ್ತೀರ’ ಅಂತ ನಾನು ಹೇಳಿದ್ದರ ಬಗ್ಗೆ ಮಾತಾಡ್ಕೊಳ್ತಾ ಇದ್ದೀರಾ?
20 ನಿಜ ಹೇಳ್ತೀನಿ, ನೀವು ದುಃಖದಿಂದ ಅಳ್ತೀರ. ಆದ್ರೆ ಲೋಕ ಸಂತೋಷಪಡುತ್ತೆ. ನೀವು ದುಃಖಪಡ್ತೀರ. ಆದ್ರೆ ಆ ದುಃಖ ಸಂತೋಷವಾಗಿ ಬದಲಾಗುತ್ತೆ.+
21 ಒಬ್ಬ ಸ್ತ್ರೀಗೆ ಮಗು ಹುಟ್ಟೋ ಸಮಯ ಬಂದಾಗ ದುಃಖಪಡ್ತಾಳೆ. ಆದ್ರೆ ಮಗು ಹುಟ್ಟಿದ ಮೇಲೆ ಆ ಮಗು ಮುಖ ನೋಡಿ ಸಂತೋಷದಿಂದ ದುಃಖವನ್ನ ಮರೆತುಬಿಡ್ತಾಳೆ.
22 ಅದೇ ತರ ನೀವು ಈಗ ದುಃಖಪಡ್ತಿದ್ದೀರ. ಆದ್ರೆ ನೀವು ನನ್ನನ್ನ ಮತ್ತೆ ನೋಡ್ತೀರ. ಆಗ ನಿಮ್ಮ ಮನಸ್ಸು ಸಂತೋಷದಿಂದ ಉಕ್ಕುತ್ತೆ.+ ನಿಮ್ಮ ಆನಂದವನ್ನ ಯಾರೂ ಕಿತ್ಕೊಳ್ಳಕ್ಕೆ ಆಗಲ್ಲ.
23 ಆ ದಿನ ನೀವು ನನಗೆ ಯಾವ ಪ್ರಶ್ನೆನೂ ಕೇಳಲ್ಲ. ನಿಜ ಹೇಳ್ತೀನಿ, ನೀವು ನನ್ನ ಅಪ್ಪನ ಹತ್ರ ನನ್ನ ಹೆಸ್ರಲ್ಲಿ ಏನೇ ಬೇಡ್ಕೊಂಡ್ರೂ+ ಅದನ್ನ ಕೊಡ್ತಾನೆ.+
24 ಇಲ್ಲಿ ತನಕ ನೀವು ನನ್ನ ಹೆಸ್ರಲ್ಲಿ ಏನೂ ಕೇಳಿಲ್ಲ. ಕೇಳಿನೋಡಿ, ಅದು ನಿಮಗೆ ಸಿಗುತ್ತೆ. ಆಗ ನಿಮಗೆ ತುಂಬ ಖುಷಿಯಾಗುತ್ತೆ.
25 ನಾನು ತುಂಬ ವಿಷ್ಯಗಳನ್ನ ಉದಾಹರಣೆಯಾಗಿ ಹೇಳ್ತಾ ಇದ್ದೆ. ಆದ್ರೆ ಒಂದು ಸಮಯ ಬರುತ್ತೆ, ಆಗ ನಾನು ಉದಾಹರಣೆ ಬಳಸಿ ಹೇಳಲ್ಲ. ಬದಲಿಗೆ ನನ್ನ ಅಪ್ಪನ ಬಗ್ಗೆ ನೇರವಾಗಿ, ಸ್ಪಷ್ಟವಾಗಿ ಹೇಳ್ತೀನಿ.
26 ಆ ದಿನ ನೀವು ನನ್ನ ಹೆಸ್ರಲ್ಲಿ ಪ್ರಾರ್ಥನೆ ಮಾಡ್ತಿರ. ಅದರರ್ಥ ನಾನು ನಿಮಗೋಸ್ಕರ ಅಪ್ಪನ ಹತ್ರ ಬೇಡ್ಕೊಳ್ಳಲ್ಲ ಅಂತಲ್ಲ. ನಾನೂ ಬೇಡ್ಕೊಳ್ತೀನಿ.
27 ಅಪ್ಪನಿಗೂ ನಿಮ್ಮ ಮೇಲೆ ತುಂಬ ಪ್ರೀತಿ ಇದೆ. ಯಾಕಂದ್ರೆ ನೀವು ನನ್ನನ್ನ ಪ್ರೀತಿಸಿದ್ರಿ,+ ನಾನು ದೇವರ ಪ್ರತಿನಿಧಿ ಅಂತ ನಂಬಿದ್ರಿ.+
28 ನಾನು ಅಪ್ಪನ ಪ್ರತಿನಿಧಿಯಾಗಿ ಲೋಕಕ್ಕೆ ಬಂದೆ. ಈಗ ಈ ಲೋಕ ಬಿಟ್ಟು ಅಪ್ಪನ ಹತ್ರ ಹೋಗ್ತಾ ಇದ್ದೀನಿ”+ ಅಂದನು.
29 ಅದಕ್ಕೆ ಶಿಷ್ಯರು “ಈಗ ನೀನು ನೇರವಾಗಿ, ಸ್ಪಷ್ಟವಾಗಿ ಮಾತಾಡ್ತಾ ಇದ್ದೀಯ. ಉದಾಹರಣೆ ಬಳಸಿ ಮಾತಾಡ್ತಿಲ್ಲ.
30 ನಿನಗೆಲ್ಲಾ ಗೊತ್ತು ಅಂತ, ನಾವು ಯಾವುದೇ ಪ್ರಶ್ನೆ ಕೇಳೋ ಅವಶ್ಯಕತೆ ಇಲ್ಲ ಅಂತ ಈಗ ಅರ್ಥ ಆಯ್ತು. ಹಾಗಾಗಿ ನೀನು ದೇವ್ರಿಂದ ಬಂದಿದ್ದೀಯ ಅಂತ ನಂಬ್ತೀವಿ” ಅಂದ್ರು.
31 ಯೇಸು ಅವ್ರಿಗೆ “ಈಗ ನಂಬ್ತಿದ್ದೀರಾ?
32 ನೋಡಿ, ಒಂದು ಸಮಯ ಬರುತ್ತೆ, ಆ ಸಮಯ ಈಗಾಗಲೇ ಬಂದಿದೆ. ನೀವೆಲ್ಲ ನನ್ನನ್ನ ಬಿಟ್ಟು ನಿಮ್ಮನಿಮ್ಮ ಮನೆಗೆ ಓಡಿಹೋಗ್ತೀರ.+ ಆದ್ರೆ ನಾನು ಒಂಟಿ ಅಲ್ಲ. ನನ್ನ ಜೊತೆ ನನ್ನ ಅಪ್ಪ ಇದ್ದಾನೆ.+
33 ನನ್ನಿಂದಾಗಿ ನಿಮಗೆ ಶಾಂತಿ ಸಿಗಲಿ+ ಅಂತಾನೇ ಇದೆಲ್ಲ ಹೇಳಿದೆ. ಲೋಕದಲ್ಲಿ ನಿಮಗೆ ಕಷ್ಟ-ತೊಂದರೆ ಬರುತ್ತೆ. ಆದ್ರೆ ಭಯಪಡಬೇಡಿ! ಯಾಕಂದ್ರೆ ನಾನು ಈ ಲೋಕವನ್ನ ಗೆದ್ದಿದ್ದೀನಿ. ಧೈರ್ಯವಾಗಿರಿ!”+ ಅಂದನು.
ಪಾದಟಿಪ್ಪಣಿ
^ “ಇಲ್ಲಿ ‘ಸಹಾಯಕ’ ಅನ್ನೋದು ಪವಿತ್ರಶಕ್ತಿ. ‘ಸಹಾಯಕ’ ಅನ್ನೋ ಪದಕ್ಕೆ ಗ್ರೀಕಲ್ಲಿ ಪುಲ್ಲಿಂಗ ಮತ್ತು ನಪುಂಸಕ ರೂಪ ಎರಡೂ ಇದೆ.”