ಜೀವಿಗಳು ಹೇಗೆ ಅಸ್ತಿತ್ವಕ್ಕೆ ಬಂದವು?
ಈ ಕೆಳಗಿನ ಪ್ರಶ್ನೆಗೆ ನೀವೇನು ಉತ್ರ ಕೊಡ್ತೀರಾ?
ಜೀವಿಗಳು ಹೇಗೆ ಅಸ್ತಿತ್ವಕ್ಕೆ ಬಂದವು?
ವಿಕಾಸದಿಂದ
ಸೃಷ್ಟಿಯಿಂದ
ಸಾಮಾನ್ಯವಾಗಿ ಜನ, ವಿಜ್ಞಾನನ ನಂಬೋರು “ವಿಕಾಸದಿಂದ” ಜೀವಿಗಳು ಅಸ್ತಿತ್ವಕ್ಕೆ ಬಂದವು ಅಂತಾರೆ, ದೇವರನ್ನ ನಂಬೋರು “ಸೃಷ್ಟಿ” ಆಯ್ತು ಅಂತಾರೆ.
ಆದ್ರೆ ಇದು ನಿಜ ಅಲ್ಲ.
ಜಾಸ್ತಿ ಓದಿರೋರು, ವಿಜ್ಞಾನಿಗಳು ಕೂಡ ವಿಕಾಸವಾದವನ್ನು ನಂಬಲ್ಲ, ಅವ್ರು ಅದ್ರ ಬಗ್ಗೆ ಸಂಶಯಗಳನ್ನ ವ್ಯಕ್ತಪಡಿಸ್ತಾರೆ.
ಕೀಟಶಾಸ್ತ್ರದ ಪ್ರೋಫೆಸರ್ ಗೆರಾರ್ಡ್ ಕಾಲೇಜಿನಲ್ಲಿ ವಿಕಾಸವಾದದ ಬಗ್ಗೆ ಓದಿದ್ರು. ಅವ್ರು ಹೇಳಿದ್ದು, “ನಾನು ವಿಕಾಸವಾದದ ಬಗ್ಗೆ ಟೆಸ್ಟ್ನಲ್ಲಿ ಪ್ರೊಫೆಸರ್ಗಳಿಗೆ ಬೇಕಾದ ಉತ್ರ ಬರೆಯುತ್ತಿದ್ದೆ. ಆದ್ರೆ ಅದನ್ನ ನಾನು ನಂಬ್ತಿರಲಿಲ್ಲ.”
ಜೀವಿಗಳು ವಿಕಾಸವಾದದ ಮೂಲಕನೇ ಸೃಷ್ಟಿ ಆಯ್ತು ಅಂತ ವಿಜ್ಞಾನನ ಅರೆದು ಕುಡಿದಿರೋರು ಕೂಡ ಯಾಕೆ ನಂಬಲ್ಲ? ಇದಕ್ಕೆ ಕಾರಣ ಏನು? ಅನೇಕ ಸಂಶೋಧಕರು ಈ ವಿಷಯದಲ್ಲಿ ಗಲಿಬಿಲಿಯಾಗೋದಕ್ಕೆ ಮುಂದಿನ ಈ ಎರಡು ಪ್ರಶ್ನೆಗಳೇ ಕಾರಣ. (1) ಜೀವಿಗಳ ಉಗಮ ಹೇಗಾಯ್ತು? (2) ಜೀವಿಗಳ ಬೆಳವಣಿಗೆ ಹೇಗಾಯ್ತು?
ಜೀವಿಗಳ ಉಗಮ ಹೇಗಾಯ್ತು?
ಕೆಲವರು ಏನು ಹೇಳ್ತಾರೆ? ಜೀವ ಇಲ್ಲದೇ ಇರೋ ವಸ್ತುಗಳಿಂದ ತನ್ನಿಂದ ತಾನೇ ನಿಧಾನವಾಗಿ ಜೀವಿಗಳು ಸೃಷ್ಟಿ ಆದವು.
ಆದ್ರೆ ಈ ಮಾತನ್ನ ಕೆಲವರು ಯಾಕೆ ನಂಬಲ್ಲ. ಈಗಿರೋ ವಿಜ್ಞಾನಿಗಳಿಗೆ, ಜೀವಿಗಳ ರಸಾಯನಶಾಸ್ತ್ರ ಮತ್ತು ಅಣುಗಳ ರಚನೆ ಬಗ್ಗೆ ಮೊದಲಿಗಿಂತ ಜಾಸ್ತಿ ಮಾಹಿತಿ ಗೊತ್ತಿದೆ. ಇಷ್ಟೆಲ್ಲಾ ಗೊತ್ತಿದ್ರೂ ಜೀವಿಗಳ ಉಗಮ ಹೇಗಾಯ್ತು ಅಂತ ಖಚಿತವಾಗಿ ಅವ್ರಿಗೆ ಹೇಳೋದಕ್ಕೆ ಆಗ್ತಿಲ್ಲ. ಯಾಕಂದ್ರೆ ಜೀವ ಇಲ್ಲದೇ ಇರೋ ವಸ್ತುಗಳಿಗೂ, ಜೀವ ಇರೋ ಒಂದು ಚಿಕ್ಕ ಜೀವಕೋಶಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.
ಕೋಟ್ಯಾನುಕೋಟಿ ವರ್ಷಗಳ ಹಿಂದೆ ಭೂಮಿ ಮೇಲೆ ಪರಿಸ್ಥಿತಿ ಹೇಗಿತ್ತು ಅಂತ ವಿಜ್ಞಾನಿಗಳು ಬರೀ ಊಹಿಸಿಕೊಳ್ಳಬಹುದು ಅಷ್ಟೇ. ಆದ್ರೆ ಜೀವಿಗಳು ಎಲ್ಲಿ ಉಗಮ ಆದ್ವು ಅನ್ನೋದ್ರ ಬಗ್ಗೆ ಅವರೆಲ್ಲರಿಗೂ ಒಂದೇ ಅಭಿಪ್ರಾಯ ಇಲ್ಲ. ಉದಾಹರಣೆಗೆ, ಕೆಲವ್ರು ಜೀವಿಗಳ ಉಗಮ ಜ್ವಾಲಾಮುಖಿಯಲ್ಲಿ ಅಥವಾ ಸಮುದ್ರದ ಆಳದಲ್ಲಿ ಶುರು ಆಗಿರಬಹುದು ಅಂತಾರೆ. ಇನ್ನು ಕೆಲವ್ರು ಜೀವಿಗಳ ಉಗಮಕ್ಕೆ ಬೇಕಾದ ಘಟಕಗಳು ವಿಶ್ವದ ಬೇರೆ ಜಾಗದಲ್ಲಿ ರಚನೆಯಾಗಿ ಉಲ್ಕೆಗಳ ಮೂಲಕ ಭೂಮಿಗೆ ಬಂತು ಅಂತಾರೆ. ಆದ್ರೆ ಅವ್ರು ಕೊಡೋ ಯಾವ ಕಾರಣನೂ ಜೀವಿಗಳ ಉಗಮ ಹೇಗಾಯ್ತು ಅನ್ನೋದಕ್ಕೆ ಸ್ಪಷ್ಟವಾದ ಉತ್ರ ಅಲ್ಲ, ಬದಲಿಗೆ ಜೀವ ಬೇರೆಲ್ಲೋ ಉಗಮ ಆಯ್ತು ಅಂತಷ್ಟೇ ಹೇಳ್ತಾರೆ.
ಅಣುಗಳು ಅನುವಂಶಿಕ ವಸ್ತುಗಳಾಗಿ ಬದಲಾಗಿರಬಹುದು ಅಂತ ಇವತ್ತಿನ ವಿಜ್ಞಾನಿಗಳು ಹೇಳ್ತಾರೆ. ಈ ಅಣುಗಳು ಜಡವಸ್ತುಗಳಿಂದ ಕ್ರಮೇಣ ತನ್ನಿಂದ ತಾನೇ ಸೃಷ್ಟಿ ಆಯ್ತು ಮತ್ತು ತನ್ನ ಸಂಖ್ಯೆನ ಹೆಚ್ಚಿಸಿಕೊಂಡಿತು ಅನ್ನೋದು ಅವ್ರ ವಾದ. ಆದ್ರೆ ಈ ತರ ಆಗಿದೆ ಅನ್ನೋದಕ್ಕೆ ವಿಜ್ಞಾನಿಗಳ ಹತ್ರ ಯಾವುದೇ ಆಧಾರ ಇಲ್ಲ. ಇಷ್ಟೆಲ್ಲಾ ಬೆಳವಣಿಗೆ ಆಗಿದ್ರೂ ಲ್ಯಾಬ್ನಲ್ಲಿ ಇಂಥ ಒಂದೇ ಒಂದು ಚಿಕ್ಕ ಅಣುವನ್ನ ಸೃಷ್ಟಿ ಮಾಡೋಕೆ ಯಾವುದೇ ವಿಜ್ಞಾನಿಗಳಿಂದ ಆಗಿಲ್ಲ.
ಜೀವಿಗಳಿಗೆ ಮಾಹಿತಿಯನ್ನ ಸಂಗ್ರಹಿಸುವ ಮತ್ತು ರವಾನಿಸುವ ವಿಶೇಷ ಶಕ್ತಿ ಇದೆ. ಜೀವಕೋಶಗಳು, ಅನುವಂಶಿಕ ರಚನಾ ವ್ಯವಸ್ಥೆಯಲ್ಲಿರೋ (ಜೆನೆಟಿಕ್ ಕೋಡ್) ಸೂಚನೆಗಳನ್ನ ದೇಹದ ಬೇರೆ ಬೇರೆ ಭಾಗಗಳಿಗೆ ತಿಳಿಸಿ, ರವಾನಿಸುತ್ತವೆ. ಕೆಲವು ವಿಜ್ಞಾನಿಗಳು ಜೆನೆಟಿಕ್ ಕೋಡನ್ನ ಕಂಪ್ಯೂಟರ್ ಸಾಫ್ಟ್ವೇರ್ಗೆ ಮತ್ತು ಅದ್ರ ರಾಸಾಯನಿಕ ರಚನೆಯನ್ನ ಕಂಪ್ಯೂಟರ್ ಹಾರ್ಡ್ವೇರ್ಗೆ ಹೋಲಿಸಿದ್ದಾರೆ. ಆದ್ರೆ ವಿಕಾಸವಾದದಲ್ಲಿ ಜೆನೆಟಿಕ್ ಕೋಡ್ನಲ್ಲಿರೋ ಮಾಹಿತಿಯ ಮೂಲ ಹೇಗೆ ಬಂತು ಅಂತ ಅವ್ರಿಗೆ ಹೇಳೋಕೆ ಆಗ್ತಿಲ್ಲ.
ಒಂದು ಜೀವಕೋಶ ಕೆಲ್ಸ ಮಾಡಬೇಕು ಅಂದ್ರೆ ಪ್ರೋಟೀನ್ ಅಣುಗಳು ಬೇಕೇ ಬೇಕು. ಪ್ರೋಟೀನಿನ ಒಂದು ಚಿಕ್ಕ ಅಣುವಿನಲ್ಲಿ ನೂರಾರು ಅಮೈನೊ ಆಸಿಡ್ಗಳಿದ್ದು ಅವು ಒಂದು ನಿರ್ದಿಷ್ಟ ರೀತಿಯಲ್ಲಿ ಒಂದಕ್ಕೊಂದು ಎಣೆದುಕೊಂಡಿರುತ್ತವೆ. ಆ ಪ್ರೋಟೀನ್ ಕೆಲ್ಸ ಮಾಡಬೇಕು ಅಂದ್ರೆ ಅದು ನಿರ್ದಿಷ್ಟವಾಗಿ ತ್ರೀ ಡೈಮೆನ್ಷನ್ ಶೇಪ್ನಲ್ಲಿ (ಮೂರು ಎಳೆಗಳ ಆಕಾರ) ಮಡಚಿರಬೇಕು. ಸ್ವಲ್ಪ ಏರುಪೇರು ಆದ್ರೂ ಅದು ಕೆಲ್ಸ ಮಾಡಲ್ಲ. ಇಷ್ಟು ಜಟಿಲವಾದ ಪ್ರೋಟೀನ್ ಅಣುವಿನ ರಚನೆ ತನ್ನಿಂದ ತಾನೇ ಆಯ್ತು ಅನ್ನೋದನ್ನ ಕೆಲವು ವಿಜ್ಞಾನಿಗಳು ಒಪ್ಪೋದಿಲ್ಲ. ಅದಕ್ಕೆ ಭೌತಶಾಸ್ತ್ರಜ್ಞರಾದ ಪೌಲ್ ಡೇವಿಸ್, “ಒಂದು ಜೀವಕೋಶ ಕೆಲ್ಸ ಮಾಡಬೇಕು ಅಂದ್ರೆ ಅದ್ರಲ್ಲಿ ಸಾವಿರಾರು ಬೇರೆ ಬೇರೆ ಪ್ರೋಟೀನ್ಗಳು ಇರಬೇಕು. ಹಾಗಿರೋವಾಗ ಇದೆಲ್ಲಾ ಇದ್ದಕ್ಕಿದ್ದ ಹಾಗೆ ಸೃಷ್ಟಿ ಆಗೋಯ್ತು ಅಂತ ಹೇಳೋದಕ್ಕೆ ಆಗಲ್ಲ” ಅಂತ ಹೇಳ್ತಾರೆ.
ಇದ್ರಿಂದ ಏನು ಗೊತ್ತಾಗುತ್ತೆ? ತುಂಬ ದಶಕಗಳಿಂದ ಸಂಶೋಧನೆ ಮಾಡಿ ವಿಜ್ಞಾನಿಗಳು ಕೊನೆಗೆ ಹೇಳ್ತಿರೋದು ಏನಂದ್ರೆ ಒಂದು ಜೀವಿ ಸೃಷ್ಟಿ ಆಗಬೇಕು ಅಂದ್ರೆ ಈಗಾಗಲೇ ಇರೋ ಇನ್ನೊಂದು ಜೀವಿಯಿಂದನೇ ಸೃಷ್ಟಿ ಆಗಬೇಕು.
ಜೀವಿಗಳ ಬೆಳವಣಿಗೆ ಹೇಗಾಯ್ತು?
ಕೆಲವರು ಏನು ಹೇಳ್ತಾರೆ? ಆರಂಭದಲ್ಲಿದ್ದ ಜೀವಿಗಳು ದಿಢೀರ್ ಬದಲಾವಣೆ (ರಾಂಡಮ್ ಮ್ಯೂಟೇಶನ್) ಮತ್ತು ನೈಸರ್ಗಿಕ ಆಯ್ಕೆಯ (ನ್ಯಾಚುರಲ್ ಸೆಲೆಕ್ಷನ್) ಪರಿಣಾಮವಾಗಿ ಕ್ರಮೇಣ ಬೇರೆ ಬೇರೆ ಜೀವಿಗಳಾಗಿ ಬದಲಾದವು. ಮನುಷ್ಯರು ಕೂಡ ಹೀಗೆ ಬಂದ್ರು.
ಆದ್ರೆ ಈ ಮಾತನ್ನ ಕೆಲವರು ಯಾಕೆ ನಂಬಲ್ಲ. ಜೀವಕೋಶಗಳು ಒಂದಕ್ಕಿಂತ ಒಂದು ಕಷ್ಟಕರ ರಚನೆಯನ್ನ ಹೊಂದಿವೆ. ಒಂದು ರೆಫರೆನ್ಸ್ ಪ್ರಕಾರ, ಒಂದು ಸರಳ ರಚನೆ ಇರೋ ಜೀವಕೋಶ ತುಂಬಾ ಕಷ್ಟಕರ ರಚನೆ ಇರೋ ಜೀವಕೋಶ ಆಗಿ ಬದಲಾಗೋದಕ್ಕೆ ಸಾಧ್ಯನೇ ಇಲ್ಲ. “ವಿಕಾಸವಾದದ ಮೂಲಕ ಜೀವಿಗಳು ಉಗಮ ಆದ್ವು ಅನ್ನೋದು ಹೇಗೆ ಉತ್ರ ಸಿಗದ ಪ್ರಶ್ನೆಯಾಗಿದೆಯೋ ಅದೇತರ ಜೀವಕೋಶದ ರಚನೆನೂ ಪ್ರಶ್ನೆಯಾಗೇ ಉಳಿದುಬಿಟ್ಟಿದೆ” ಅಂತನೂ ಅದು ಹೇಳುತ್ತೆ.
ಕಷ್ಟಕರ ಪ್ರಕ್ರಿಯೆಗಳು ದೇಹದಲ್ಲಿ ನಡಿಬೇಕಂದ್ರೆ ಜೀವಕೋಶದಲ್ಲಿರೋ ಪ್ರೋಟೀನ್ ಅಣುಗಳು ಒಂದಕ್ಕೊಂದು ಸಹಕಾರ ಮಾಡ್ತಾ ಕೆಲ್ಸ ಮಾಡಬೇಕು ಅಂತ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಉದಾಹರಣೆಗೆ, ಪೋಷಕಾಂಶಗಳನ್ನು ಬೇರೆ ಬೇರೆ ಭಾಗಗಳಿಗೆ ರವಾನಿಸುವ ಕೆಲ್ಸ, ಅದನ್ನ ಶಕ್ತಿಯನ್ನಾಗಿ ಪರಿವರ್ತಿಸುವ ಕೆಲ್ಸ, ಜೀವಕೋಶಗಳ ರಿಪೇರಿ ಕೆಲ್ಸ, ಎಲ್ಲಾ ಜೀವಕೋಶಗಳಿಗೆ ಮಾಹಿತಿಯನ್ನ ರವಾನಿಸುವ ಕೆಲ್ಸ. ಈ ಎಲ್ಲಾ ಕಷ್ಟಕರ ಕೆಲಸಗಳು ದಿಢೀರ್ ಬದಲಾವಣೆ (ರಾಂಡಮ್ ಮ್ಯೂಟೇಶನ್) ಮತ್ತು ನೈಸರ್ಗಿಕ ಆಯ್ಕೆಯಿಂದ (ನ್ಯಾಚುರಲ್ ಸೆಲೆಕ್ಷನ್) ಮಾಡೋಕೆ ಆಗುತ್ತಾ? ಅದಕ್ಕೆ ಕೆಲವ್ರಿಗೆ ಈ ಸಿದ್ಧಾಂತನ ಒಪ್ಪಿಕೊಳ್ಳೋಕೆ ಕಷ್ಟ ಆಗುತ್ತೆ.
ಪ್ರಾಣಿಗಳ ಮತ್ತು ಮನುಷ್ಯರ ಬೆಳವಣಿಗೆಗೆ ಒಂದು ಫಲವತ್ತಾದ ಅಂಡಾಣುವಿನ (ಫರ್ಟಿಲೈಸ್ಟ್ ಎಗ್) ಅಗತ್ಯ ಇದೆ. ನಂತ್ರ ಗರ್ಭದಲ್ಲಿ ಜೀವಕೋಶಗಳು ವಿಭಜನೆ ಆಗುತ್ತಾ ಅದ್ರ ಸಂಖ್ಯೆನ ಜಾಸ್ತಿ ಮಾಡ್ಕೊಳ್ಳುತ್ತೆ. ಆಮೇಲೆ ಬೇರೆ ಬೇರೆ ಆಕಾರ ಪಡೆಯುತ್ತೆ ಮತ್ತು ಬೇರೆ ಬೇರೆ ಕೆಲ್ಸಗಳನ್ನ ಮಾಡೋ ದೇಹದ ಅಂಗಗಳಾಗಿ ಪರಿವರ್ತನೆ ಆಗುತ್ತೆ. ಇದೇ ರೀತಿ ಬದಲಾಗಬೇಕು, ಇದೇ ಜಾಗಕ್ಕೆ ಹೋಗಬೇಕು, ಇಂಥದ್ದೇ ಕೆಲ್ಸ ಮಾಡಬೇಕು ಅಂತ ಪ್ರತಿಯೊಂದು ಜೀವಕೋಶಕ್ಕೂ ಹೇಗೆ “ಗೊತ್ತಾಗುತ್ತೆ?” ಈ ಪ್ರಶ್ನೆಗೆ ವಿಕಾಸವಾದದಲ್ಲಿ ಉತ್ರ ಇಲ್ಲ.
ಒಂದು ಜಾತಿಯ ಪ್ರಾಣಿ ಬೇರೊಂದು ಜಾತಿಯ ಪ್ರಾಣಿಯಾಗಿ ವಿಕಾಸ ಆಗಬೇಕು ಅಂದ್ರೆ ಆರಂಭಿಕ ಹಂತದಲ್ಲಿ ಜೀವಕೋಶದ ಅಣುಗಳ ರಚನೆಯಲ್ಲೇ ಬದಲಾವಣೆ ಆಗಬೇಕು ಅಂತ ವಿಜ್ಞಾನಿಗಳು ತಿಳ್ಕೊಂಡಿದ್ದಾರೆ. ಆದ್ರೆ ವಿಜ್ಞಾನಿಗಳಿಗೆ ವಿಕಾಸವಾದದ ಮೂಲಕ ಒಂದು “ಸರಳ” ಜೀವಕೋಶ ಹೇಗೆ ರಚನೆ ಆಯ್ತು ಅಂತ ರುಜುಮಾಡೋಕೆ ಆಗ್ತಿಲ್ಲ. ಹಾಗಿರೋವಾಗ ದಿಢೀರ್ ಬದಲಾವಣೆ (ರಾಂಡಮ್ ಮ್ಯೂಟೇಶನ್) ಮತ್ತು ನೈಸರ್ಗಿಕ ಆಯ್ಕೆಯಿಂದ (ನ್ಯಾಚುರಲ್ ಸೆಲೆಕ್ಷನ್) ಬೇರೆ ಬೇರೆ ರೀತಿಯ ಜೀವಿಗಳು ಸೃಷ್ಟಿ ಆದ್ವು ಅಂತ ಹೇಗೆ ಹೇಳೋಕೆ ಆಗುತ್ತೆ? ಪ್ರಾಣಿಗಳ ರಚನೆ ಬಗ್ಗೆ ಜೈವಿಕ ವಿಜ್ಞಾನದ ಪ್ರೊಫೆಸರಾದ ಮೈಕಲ್ ಬೆಹೆ ಹೇಳೋದು, ಇದ್ರ ಬಗ್ಗೆ ಆದ ಸಂಶೋಧನೆಗಳು, “ನಾವು ನಿರೀಕ್ಷಿಸದ ಮತ್ತು ಆಶ್ಚರ್ಯಕರವಾದ ಕಷ್ಟಕರ ಫಲಿತಾಂಶಗಳನ್ನು ಹೊರತಂದಿದೆ. ಈ ಜಟಿಲವಾದ ಕ್ರಿಯೆಯು ಒಬ್ಬ ಬುದ್ಧಿವಂತ ಜೀವಿಯಿಂದ ಮಾತ್ರ ಮಾಡೋದಕ್ಕೆ ಆಗುತ್ತೆ ಹೊರತು ತನ್ನಿಂದ ತಾನೇ ಆಗೋದಕ್ಕೆ ಸಾಧ್ಯ ಇಲ್ಲ.”
ಮನುಷ್ಯರಿಗೆ ಮನಸಾಕ್ಷಿ, ಸ್ವಂತಬುದ್ಧಿ ಇದೆ. ಅವ್ರಿಗೆ ಯೋಚನೆ ಮಾಡೋ, ಕಾರಣ ಹೇಳೋ ಸಾಮರ್ಥ್ಯ ಇದೆ. ಒಳ್ಳೇ ಗುಣಗಳನ್ನ ಅಂದ್ರೆ ಉದಾರತೆ, ಸ್ವತ್ಯಾಗ ಮತ್ತು ಸರಿ ಯಾವುದು, ತಪ್ಪು ಯಾವುದು ಅಂತ ತಿಳ್ಕೊಳ್ಳೋ ಶಕ್ತಿ ಇದೆ. ಇಂಥಾ ಅದ್ಭುತ ಗುಣಗಳು ಮನುಷ್ಯರಿಗೆ ಹೇಗೆ ಬಂತು ಅಂತ ದಿಢೀರ್ ಬದಲಾವಣೆ (ರಾಂಡಮ್ ಮ್ಯೂಟೇಶನ್) ಮತ್ತು ನೈಸರ್ಗಿಕ ಆಯ್ಕೆ (ನ್ಯಾಚುರಲ್ ಸೆಲೆಕ್ಷನ್) ಪ್ರಕ್ರಿಯೆ ಹೇಳೋದಿಲ್ಲ.
ಇದ್ರಿಂದ ಏನು ಗೊತ್ತಾಗುತ್ತೆ? ಜೀವ ವಿಕಾಸದಿಂದ ಬಂತು ಅಂತ ರುಜುಪಡಿಸೋಕೆ ವಿಜ್ಞಾನಿಗಳ ಹತ್ರ ಯಾವುದೇ ಆಧಾರಗಳಿಲ್ಲ. ಜೀವಿಗಳ ಉಗಮ ಮತ್ತು ಬೆಳವಣಿಗೆಯ ಬಗ್ಗೆ ಅವ್ರು ಕೊಡೋ ಉತ್ರಗಳು ತೃಪ್ತಿಕರವಾಗಿಲ್ಲ.
ನಂಬಬಹುದಾದ ಉತ್ರ ಇಲ್ಲಿದೆ ನೋಡಿ!
ಈ ಎಲ್ಲಾ ವಿಷ್ಯಗಳನ್ನ ಗಮನಿಸಿದ ಮೇಲೆ, ಒಬ್ಬ ತುಂಬಾ ಬುದ್ಧಿವಂತ ಜೀವಿಯ ಕೈಕೆಲಸವೇ ಭೂಮಿ ಮೇಲಿರೋ ಜೀವಿಗಳು ಅಂತ ಅನೇಕರು ಹೇಳ್ತಾರೆ. ತತ್ವಶಾಸ್ತ್ರದ ಫ್ರೊಫೆಸರ್ ಆ್ಯಂಟನಿ ಫ್ಲೂ ಒಂದು ಸಮಯದಲ್ಲಿ ದೇವರಿಲ್ಲ ಅಂತ ವಾದಿಸ್ತಿದ್ದರು. ದಿಗ್ಭ್ರಮೆಗೊಳಿಸೋ ಜೀವ ರಚನೆಯ ಬಗ್ಗೆ ಮತ್ತು ವಿಶ್ವದಲ್ಲಿರೋ ಭೌತಿಕ ನಿಯಮಗಳ ಬಗ್ಗೆ ತಿಳ್ಕೊಂಡ ಮೇಲೆ ಅವ್ರು ತಮ್ಮ ಅಭಿಪ್ರಾಯವನ್ನ ಬದಲಾಯಿಸಿಕೊಂಡರು. ಪ್ರಾಚೀನ ತತ್ವಜ್ಞಾನಿಗಳ ಅಭಿಪ್ರಾಯದ ಪ್ರಕಾರ, “ನಾವು ಅಂದ್ಕೊಂಡಿದ್ದ ತರ ಫಲಿತಾಂಶ ಬರದೇ ಇದ್ದಾಗ ರುಜುವಾತುಗಳು ಏನು ಹೇಳುತ್ತೋ ಅದನ್ನ ನಂಬಬೇಕು” ಅನ್ನೋದನ್ನ ಫ್ರೊಫೆಸರ್ ಫ್ಲೂ ಒಪ್ಕೊಂಡ್ರು. ದೇವ್ರೇ ಇಲ್ಲ ಅಂದ್ಕೊಂಡಿದ್ದ ಅವ್ರು ಆಧಾರ ಸಿಕ್ಕಿದಾಗ ಒಬ್ಬ ಸೃಷ್ಟಿಕರ್ತ ಇದ್ದಾನೆ ಅಂತ ಒಪ್ಕೊಬೇಕಾಯ್ತು.
ಆರಂಭದಲ್ಲಿ ಹೇಳಿದ್ದ ಗೆರಾರ್ಡ್ ಕೂಡ ತಮ್ಮ ಅಭಿಪ್ರಾಯನ ಬದಲಾಯಿಸಿಕೊಂಡ್ರು. ತುಂಬಾ ಓದಿದ್ರೂ, ಕೀಟಶಾಸ್ತ್ರದಲ್ಲಿ ಪ್ರವೀಣರಾಗಿದ್ರೂ ಅವ್ರು ಹೇಳಿದ್ದು, “ಜೀವ ಇಲ್ಲದೇ ಇರೋ ವಸ್ತುಗಳಿಂದ ಇದ್ದಕ್ಕಿದ್ದ ಹಾಗೆ ಜೀವಿಗಳು ಹುಟ್ಕೊಳ್ತು ಅನ್ನೋದಕ್ಕೆ ಯಾವುದೇ ಆಧಾರ ಇಲ್ಲ. ಜೀವಿಗಳಲ್ಲಿರೋ ಕ್ರಮ ಮತ್ತು ಕಷ್ಟಕರ ರಚನೆಗಳನ್ನ ನೋಡಿದ ಮೇಲೆ ಖಂಡಿತ ಇದನ್ನ ಯಾರೋ ಒಬ್ಬರು ಸಂಯೋಜಿಸಿ, ವಿನ್ಯಾಸ ಮಾಡಿರಬೇಕು ಅಂತ ಗೊತ್ತಾಗುತ್ತೆ.”
ಒಂದು ಚಿತ್ರನ ನೋಡಿದಾಗ ಆ ಕಲೆಗಾರನ ಕಲೆಯ ಬಗ್ಗೆ ಹೇಗೆ ಗೊತ್ತಾಗುತ್ತೋ ಅದೇ ತರ ಗೆರಾರ್ಡ್ ಸೃಷ್ಟಿನ ನೋಡಿ ಸೃಷ್ಟಿಕರ್ತನ ಗುಣಗಳ ಬಗ್ಗೆ ತಿಳ್ಕೊಂಡ್ರು. ಅಲ್ಲದೇ ಬೈಬಲನ್ನ ಓದಿ ಆತನ ಬಗ್ಗೆ ತಿಳ್ಕೊಂಡ್ರು. (2 ತಿಮೊತಿ 3:16) ಮನುಷ್ಯರ ಸೃಷ್ಟಿ ಬಗ್ಗೆ ಇದ್ದ ಅನೇಕ ಪ್ರಶ್ನೆಗಳಿಗೆ ಉತ್ರ, ಇವತ್ತಿರೋ ಸಮಸ್ಯೆಗಳನ್ನ ಹೇಗೆ ಬಗೆಹರಿಸಿಕೊಳ್ಳಬಹುದು ಅಂತನೂ ಕಲಿತ್ರು. ಬೈಬಲ್ ಕೂಡ ಒಬ್ಬ ವಿವೇಕಿಯ ಕೈಕೆಲಸ ಅಂತ ಅರ್ಥ ಮಾಡ್ಕೊಂಡ್ರು.
ಗೆರಾರ್ಡ್ ತಮ್ಮ ಪ್ರಶ್ನೆಗಳಿಗೆ ಬೈಬಲಿನಿಂದ ಉತ್ರ ತಿಳ್ಕೊಂಡ್ರು. ನೀವು ತಿಳ್ಕೊಬೇಕಾ? ಹಾಗಿದ್ರೆ ಬೈಬಲನ್ನ ಓದಿ.